-->
ಲಾಡ್ಜ್ ಗೆ ಕರೆಸಿಕೊಂಡು ಯುವಕನನ್ನು ಸುಲಿಗೆ: ಬಂಧಿತ ಖತರ್ನಾಕ್ ಲೇಡಿ ಮೊಬೈಲ್ ನಲ್ಲಿತ್ತು ಸ್ಪೋಟಕ ಮಾಹಿತಿ

ಲಾಡ್ಜ್ ಗೆ ಕರೆಸಿಕೊಂಡು ಯುವಕನನ್ನು ಸುಲಿಗೆ: ಬಂಧಿತ ಖತರ್ನಾಕ್ ಲೇಡಿ ಮೊಬೈಲ್ ನಲ್ಲಿತ್ತು ಸ್ಪೋಟಕ ಮಾಹಿತಿ

ಕೊಚ್ಚಿ : ಪ್ರೀತಿಸುವ ನಾಟಕವಾಡಿ, ಯುವಕನೋರ್ವನನ್ನು ಲಾಡ್ಜ್ ಗೆ ಕರೆದೊಯ್ದು ಉಳಿದ ಮೂವರೊಂದಿಗೆ ಸೇರಿ, ಆತನ ಮೊಬೈಲ್ ಫೋನ್, ಹಣ ಮತ್ತು ಹಾಗೂ ಒಡವೆಗಳನ್ನು ದೋಚಿರುವ ಖತರ್ನಾಕ್ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಇದೀಗ ವಶಪಡಿಸಿಕೊಂಡಿರುವ ಆಕೆಯ ಮೊಬೈಲ್‌ನಲ್ಲಿ ಮಹತ್ವದ ದಾಖಲೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಕೇರಳ ರಾಜ್ಯದ ಉಮಯನಲ್ಲೂರು ಮೂಲದ ಹಸೀನಾ (28), ಆಕೆಯ ಪತಿ ಜೆ.ಜಿತಿನ್ ( 28 ) , ಎಸ್ . ಅನ್ಶದ್ ( 26 ) ಬಂಧಿತ ಆರೋಪಿಗಳು. ಕೊಲ್ಲಂ ಮೂಲದ ಆರೋಪಿ ಅನಾಸ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಬಲೆ ಬೀಸಲಾಗಿದೆ. 

ಹಸೀನಾ ಇನ್ನೂ ಹಲವಾರು ಮಂದಿಯನ್ನು ತನ್ನ ಬಲೆಗೆ ಬೀಳಿಸಿ, ಹಣ ಮತ್ತು ಒಡವೆ ಸುಲಿಗೆ ಮಾಡಿರುವುದು ಆಕೆಯ ಮೊಬೈಲ್ ನಿಂದ ಬಯಲಾಗಿದೆ. ತನ್ನ ವೀಡಿಯೋ ಕಾಲ್‌ಗೆ ಸೇರಿಕೊಳ್ಳಿ ಎಂದು ಕೇಳುತ್ತಿದ್ದ ಆಕೆ ಬಂದವರೊಡನೆ ಬಣ್ಣದ ಮಾತುಗಳನ್ನು ಆಡಿ, ಸಲುಗೆ ಬೆಳೆಸಿಕೊಳ್ಳುತ್ತಿದ್ದಳು. ಬಳಿಕ ಅವರನ್ನು ತಾನಿದ್ದಲ್ಲಿಗೆ ಕರೆಸಿಕೊಂಡು ದೋಚುವುದೇ ಈಕೆಯ ಕಾರ್ಯವಾಗಿತ್ತು. ಆಕೆಯ ಮೊಬೈಲ್‌ನಲ್ಲಿರುವ ವೀಡಿಯೋ ಕಾಲ್ ಮಾಹಿತಿ, ಯಾರನ್ನೆಲ್ಲಾ ಸಂಪರ್ಕಿಸಿದ್ದಾಳೆ ಎಂಬ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.

ಕೊಟ್ಟಾಯಂನ ವೈಕ್ಕೊಮ್ ಮೂಲದ 34 ವರ್ಷದ ಸಂತ್ರಸ್ತ ಯುವಕನನ್ನು ಆರೋಪಿತೆ ಹಸೀನಾ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡಿದ್ದಳು. ಆತನೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದ ಹಸೀನಾ ಬಹಳ ಹತ್ತಿರವಾಗಿದ್ದಳು. ಅದೇ ಸಲುಗೆಯಲ್ಲಿ ಆಕೆ ಯುವಕನನ್ನು ಎರ್ನಾಕುಲಂ ಜನರಲ್ ಹಾಸ್ಪಿಟಲ್ ಬಳಿಯಿರುವ ಲಾಡ್ಜ್‌ಗೆ ಆಗಸ್ಟ್ 8ರಂದು ಕರೆಸಿಕೊಂಡಿದ್ದಳು. ಆಕೆಯ ಮಾತು ನಂಬಿದ ಸಂತ್ರಸ್ತ ಯುವಕ ಲಾಡ್ಜ್ ನ ರೂಮ್ ನಂಬರ್ 205ಕ್ಕೆ ಹೋಗಿದ್ದಾನೆ. ಆತ ಲಾಡ್ಜ್ ಕೊಠಡಿಯೊಳಗೆ ಹೋಗುತ್ತಿದ್ದಂತೆ ಹಸೀನಾ ಹಾಗೂ ಇತರ ಮೂವರು ಆರೋಪಿಗಳು ಯುವಕನನ್ನು ಹಿಡಿದುಕೊಂಡು ಕುರ್ಚಿಗೆ ಕಟ್ಟಿಹಾಕಿದ್ದಾರೆ. ಬಳಿಕ ಆತನ ಬಾಯಿಗೆ ಬಟ್ಟೆ ತುರುಕಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. 

ಬಳಿಕ ಯುವಕನ ಕತ್ತಿನಲ್ಲಿ ಚಿನ್ನದ ಸರ , ಬ್ರೇಸ್ಲೆಟ್ , ರಿಂಗ್ ಮತ್ತು 20 ಸಾವಿರ ರೂ. ಬೆಲೆ ಬಾಳುವ ಮೊಬೈಲ್ ಫೋನ್ ಹಾಗೂ ಪರ್ಸ್ ನಲ್ಲಿದ್ದ 5 ಸಾವಿರ ರೂ. ನಗದು ದೋಚಿದ್ದಾರೆ. ಇಷ್ಟೇ ಅಲ್ಲದೆ , ಆತನ ಫೋನ್ ಬಳಸಿಕೊಂಡು ಬಲವಂತವಾಗಿ ಆತನ ಬ್ಯಾಂಕ್ ಖಾತೆಯಿಂದ 15 ಸಾವಿರ ರೂ. ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. 

ಹಲ್ಲೆಯಿಂದಾಗಿ ಯುವಕನ ಮೈಮೇಲೆ ಗಾಯಗಳಾಗಿತ್ತು. ಬಳಿಕ ಆತ ಚಿಕಿತ್ಸೆ ಪಡೆದು, ಆಗಸ್ಟ್ 13ರಂದು ಎರ್ನಾಕುಲಂ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಡ್ಜ್‌ನಲ್ಲಿರುವ ಸಿಸಿಟಿವಿ ದೃಶ್ಯಗಳು ಹಾಗೂ ಹಣ ವರ್ಗಾವಣೆಯಾಗಿರುವ ಖಾತೆಯ ಮೂಲಕ ಆರೋಪಿಗಳ ಸುಳಿವು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article