Kadaba :-ಮರದ ಬಡಿಗೆಗೆ ಬಟ್ಟೆ ಕಟ್ಟಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಾಟ.. ಇದು ಕಡಬದ ರಸ್ತೆಯೊಂದರ ದುರವಸ್ಥೆ..!!
Saturday, August 20, 2022
ಕಡಬ
ನಿತ್ಯ ಕಾಡಾನೆ ಅಲೆದಾಡುವ ಪ್ರದೇಶದಲ್ಲಿ ರಸ್ತೆ ಸಮರ್ಪಕವಿಲ್ಲದ ಕಾರಣ ಅನಾರೋಗ್ಯಕ್ಕೆ ತುತ್ತಾದ ವೃದ್ದ ಮಹಿಳೆಯೊಬ್ಬರನ್ನು ಎರಡು ಕಿ.ಮೀ ದೂರ ಮುಖ್ಯರಸ್ತೆಗೆ ತರಲು ಮರದ ಬಡಿಗೆಗೆ ಬಟ್ಟೆ ಕಟ್ಟಿ ಅದರಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕರೆದೊಯ್ದ ಘಟನೆ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಕಡಬ ದಿಂದ ವರದಿಯಾಗಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ಕಲ್ಲುಗುಡ್ಡೆ ಸಮೀಪದ ಬಳ್ಳಕ್ಕ ಎಂಬಲ್ಲಿ ಆ.19ರಂದು ಈ ಘಟನೆ ನಡೆದಿರುವುದಾಗಿದೆ. ಎಪ್ಪತ್ತು ವರ್ಷದ ಕಮಲ ಎಂಬ ಮಹಿಳೆಯೊಬ್ಬರು ಕಾಲು ನೋವಿನಿಂದ ನರಳುತ್ತಿದ್ದ ಹಿನ್ನೆಲೆಯಲ್ಲಿ ಎಂಜಿರ ಮೂಲಕ ಉಪ್ಪಿನಂಗಡಿಗೆ ತುರ್ತಾಗಿ ಕರೆದೊಯ್ಯಬೇಕಿತ್ತು. ಆದರೆ ರಸ್ತೆ ಇದ್ದರೂ ಅಭಿವೃದ್ದಿ ಕಾರಣ ಹಿನ್ನೆಲೆಯಲ್ಲಿ ವಾಹನ ಓಡಾಟ ಕಷ್ಟಕರವಾಗಿತ್ತು. ಹೀಗಾಗಿ ಕುಟುಂಬಸ್ಥರು ಮರದ ಬಡಿಗೆಗೆ ಬಟ್ಟೆಯೊಂದನ್ನು ಕಟ್ಟಿ ಅದರಲ್ಲಿ ಮಹಿಳೆಯನ್ನು ಕುಳ್ಳಿರಿಸಿ ಎಂಜಿರ ಮುಖ್ಯ ರಸ್ತೆಗೆ ತಲುಪಿಸಿದ್ದಾರೆ ಎನ್ನಲಾಗಿದೆ. ವೃದ್ದ ಮಹಿಳೆಯನ್ನು ಹೊತ್ತುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೂಜಿಬಾಳ್ತಿಲ-ಕೊಣಾಜೆ ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಈ ಭಾಗದ ಜನರಿಗೆ ಎಂಜಿರ ಹತ್ತಿರದ ಪೇಟೆಯಾಗಿದೆ. ಇತ್ತೀಚೆಗೆ ಸುರಿದ ಮಹಾ ಮಳೆಗೆ ಈ ರಸ್ತೆ ಕೆಸರುಮಯವಾದ ಕಾರಣ ಈ ಭಾಗದ ಜನ ತಮ್ಮ ವಾಹನಗಳನ್ನು ಅರ್ಧ ದಾರಿಯಲ್ಲೇ ನಿಲ್ಲಿಸಿ ಕಿ.ಮೀ ಗಟ್ಟಲೆ ನಡೆದುಕೊಂಡು ಹೋಗಿ ಮನೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿತ್ತು.