ರಾಷ್ಟ್ರಗೀತೆ ಆರಂಭಕ್ಕೂ ಮುನ್ನ ಕೆ.ಎಲ್.ರಾಹುಲ್ ನಡೆದುಕೊಂಡ ರೀತಿಗೆ ಅಭಿಮಾನಿಗಳು ಫಿದಾ: ಬಹುಪರಾಕ್ ಎಂದ ನೆಟ್ಟಿಗರು
Saturday, August 20, 2022
ನವದೆಹಲಿ: ಆತಿಥೇಯ ಜಿಂಬಾಬ್ವೆ ವಿರುದ್ಧ ಗುರುವಾರ ಹರಾರೆಯಲ್ಲಿ ನಡೆದಿರುವ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ದಾಖಲೆ ಮಾಡುವ ಮೂಲಕ ಕೆ.ಎಲ್.ರಾಹುಲ್ ಭಾರತ ತಂಡದ ನಾಯಕನಾಗಿ ತಮ್ಮ ಮೊದಲ ಗೆಲುವನ್ನು ದಾಖಲಿಸಿದ್ದಾರೆ.
2022ರ ಐಪಿಎಲ್ ಪ್ರದರ್ಶನ ನೀಡಿರುವ ಕೆ.ಎಲ್.ರಾಹುಲ್ ದೀರ್ಘ ವಿರಾಮದ ಬಳಿಕ ಗುರುವಾರ ಮೈದಾನಕ್ಕೆ ಇಳಿದಿದ್ದಾರೆ. ಆದರೆ, ಪಂದ್ಯದಲ್ಲಿ ರಾಹುಲ್ ಬ್ಯಾಟಿಂಗ್ ಮಾಡದಿದ್ದರೂ ಅವರ ನಡವಳಿಕೆಯೊಂದು ಅಭಿಮಾನಿಗಳಿಗೆ ಅವರ ಮೇಲಿದ್ದ ಅಭಿಮಾನ ಇಮ್ಮಡಿಯಾಗುವಂತೆ ಮಾಡಿದೆ. ಪಂದ್ಯ ಆರಂಭಕ್ಕೂ ಮುನ್ನ ತಮ್ಮ ತಮ್ಮ ರಾಷ್ಟ್ರಗೀತೆ ಹಾಡಲು ಎರಡು ತಂಡಗಳು ಸಾಲಿನಲ್ಲಿ ನಿಂತಿದ್ದವು. ಈ ವೇಳೆ ಕೆ.ಎಲ್.ರಾಹುಲ್ ಚೂಯಿಂಗ್ ಗಮ್ ಅಗಿಯುತ್ತಿದ್ದರು. ಇನ್ನೇನು ನಮ್ಮ ರಾಷ್ಟ್ರಗೀತೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ತಮ್ಮ ಬಾಯಲ್ಲಿದ್ದ ಚೂಯಿಂಗ್ ಗಮ್ ಹೊರ ತೆಗೆದರು.
ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಣ್ಣ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೆ.ಎಲ್.ರಾಹುಲ್ ಅವರ ನಡವಳಿಕೆ ನೋಡಿ ನೆಟ್ಟಿಗರು ಬಹುಪರಾಕ್ ಎನ್ನುತ್ತಿದ್ದಾರೆ. ವೀಡಿಯೋ ನೋಡಿದ ಮೇಲೆ ನಿಮ್ಮ ಮೇಲಿನ ಗೌರವ ದುಪ್ಪಟ್ಟಾಯಿತು. ನಿಮ್ಮ ದೇಶಪ್ರೇಮಕ್ಕೆ ನಮ್ಮ ಸೆಲ್ಯೂಟ್ ಎಂದು ಕ್ರೀಡಾಭಿಮಾನಿಗಳು ಮಾಡುತ್ತಿದ್ದಾರೆ.