ಮನಾಲಿ: ಸೇತುವೆ ಕುಸಿದು ಕೊಚ್ಚಿ ಹೋದ ಇಬ್ಬರು ಯುವಕರು
Tuesday, August 16, 2022
ಮನಾಲಿ: ಇಲ್ಲಿನ ಸೊಲಾಂಗ್ ಕಣಿವೆ ಪ್ರದೇಶದ ಬಿಯಾಸ್ ನದಿಯ ಉಪನದಿ ಸೋಲಾಂಗ್ ರಿವುಲೆಟ್‌ಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತಾತ್ಕಾಲಿಕ ಕಾಲು ಸಂಕ ಕುಸಿದು ಬಿದ್ದ ಪರಿಣಾಮ, ತುಂಬಿ ಹರಿಯುತ್ತಿದ್ದ ಹೊಳೆಗೆ ಬಿದ್ದು ಯುವಕರಿಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.
ಕೊಚ್ಚಿಕೊಂಡು ಹೋಗಿರುವ ಯುವಕರಿಬ್ಬರು ಇನ್ನೂ ಪತ್ತೆಯಾಗಿಲ್ಲ. ಸೇತುವೆ ಕುಸಿದ ವೇಳೆ 3-4 ಮಂದಿ ಸೇತುವೆ ದಾಟುತ್ತಿದ್ದಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ರವಿವಾರ ರಾತ್ರಿಯಿಂದ ಹಿಮಾಚಲ ಪ್ರದೇಶದ ಬಹುತೇಕ ಕಡೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಎಲ್ಲ ನದಿ- ಹೊಳೆಗಳು ತುಂಬಿ ಹರಿಯುತ್ತಿದ್ದು, ಬಿಯಾಸ್ ನದಿ ದಂಡೆಯ ನಿವಾಸಿಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಸೊಲಾಂಗ್‌ನಲ್ಲಿ ಗ್ರಾಮ ಮೇಳಕ್ಕೆ ದೊಡ್ಡ ಸಂಖ್ಯೆಯ ಜನ ಆಗಮಿಸಿದ್ದರು. ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದೇ ಸೇತುವೆಯ ಮೂಲಕ ರಸ್ತೆ ದಾಟುತ್ತಿದ್ದರು. ಸೇತುವೆ ಕುಸಿದು ಕೆಲವು ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ನಾವು ನೋಡಿದ್ದೇನೆ. ನಿಖರವಾಗಿ ಎಷ್ಟು ಮಂದಿ ನೀರು ಪಾಲಾಗಿದ್ದಾರೆ ಎನ್ನುವುದು ತಿಳಿದಿಲ್ಲ . ಬಹುಶಃ ಮೂರು - ನಾಲ್ಕು ಮಂದಿ ಇದ್ದಿರಬಹುದು ಎಂದು ಸ್ಥಳೀಯ ನಿವಾಸಿ ಅಮರ್ ಠಾಕೂರ್ ಹೇಳಿದ್ದಾರೆ.
ಗ್ರಾಮವನ್ನು ತಲುಪಲು ಸೇತುವೆ ಇಲ್ಲದ ಕಾರಣ ಜನ ಈ ತಾತ್ಕಾಲಿಕ ಕಾಲು ಸಂಕವನ್ನು ಆಶ್ರಯಿಸಬೇಕಾಗಿದ್ದು, ಯುವಕರ ನೀರು ಪಾಲಿಗೆ ಆಡಳಿತವೇ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.