Mangaluru: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಪ್ರಥಮ ದರ್ಜೆ ಸಹಾಯಕನಿಗೆ 4ವರ್ಷ ಸಜೆ, 1ಕೋಟಿ ರೂ. ದಂಡ
Monday, August 1, 2022
ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಪ್ರಕರಣದಲ್ಲಿ ಪ್ರಥಮ ದರ್ಜೆ ಸಹಾಯಕನಿಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷಗಳ ಸಾದಾ ಸಜೆ ಮತ್ತು 1 ಕೋ.ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಬಂಟ್ವಾಳ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ, ಉಪ್ಪಿನಂಗಡಿ ನಿವಾಸಿ ಯು.ಓಂಪ್ರಕಾಶ್ ಹೆಗ್ಡೆ ಶಿಕ್ಷೆಗೊಳಗಾದ ಅಪರಾಧಿ.
ಓಂಪ್ರಕಾಶ್ ಹೆಗ್ಡೆ ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಹೊಂದಿರುವ ಬಗ್ಗೆ 2014 ಜನವರಿ 28ರಂದು ಕರ್ನಾಟಕ ಲೋಕಾಯುಕ್ತ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಮಂಗಳೂರು ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾಗಿದ್ದ ಎಸ್.ವಿಜಯ್ ಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಆರೋಪಿಗೆ 4 ವರ್ಷಗಳ ಸಾದಾ ಸಜೆ ಮತ್ತು 1 ಕೋ.ರೂ. ದಂಡ ವಿಧಿಸಿದ್ದಾರೆ.
ದಂಡ ಕಟ್ಟಲು ವಿಫಲನಾದರೆ ಮತ್ತೆ 1 ವರ್ಷ ಸಾದಾ ಸಜೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿಯು ಪ್ರಸ್ತುತ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ತಿಳಿದು ಬಂದಿದೆ.
ಕರ್ನಾಟಕ ಲೋಕಾಯುಕ್ತ ಮಂಗಳೂರಿನ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ಸರಕಾರದ ಪರವಾಗಿ ವಾದ ಮಂಡಿಸಿದ್ದಾರೆ.