ಮಂಗಳೂರು: ಕಾಂಗ್ರೆಸ್ ತನ್ನ ಜಗಳವನ್ನು ಬಗೆಹರಿಸಿ ಒಟ್ಟಾಗಿ ಚುನಾವಣೆ ಎದುರಿಸಿಲಿ; ನಳಿನ್ ಟಾಂಗ್
Wednesday, August 10, 2022
ಮಂಗಳೂರು: ಬಿಜೆಪಿ ಸರಕಾರದ ಈ ಅವಧಿಯಲ್ಲಿ ಬಸವರಾಜ ಬೊಮ್ಮಾಯಿಯವರೇ ಪೂರ್ಣಾವಧಿ ಸಿಎಂ ಆಗಲಿದ್ದಾರೆ. ಆದರೆ ಗೊಂದಲ ಸೃಷ್ಟಿಸುವ ಕಾಂಗ್ರೆಸ್ ನ ಯಾವ ಆಟವೂ ನಡೆಯೋಲ್ಲ. ಕಾಂಗ್ರೆಸ್ ಅವರ ಜಗಳವನ್ನು ಬಗೆಹರಿಸಿ ಒಟ್ಟಾಗಿ ಚುನಾವಣೆ ಎದುರಿಸಿಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಕಾಂಗ್ರೆಸ್ ಟ್ವೀಟ್ ಗೆ ಟಾಂಗ್ ನೀಡಿದರು.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ಉತ್ಸವದ ಮೂಲಕ ಕಾಂಗ್ರೆಸ್ ಒಳಜಗಳ ಬೀದಿಗೆ ಬಂದಿದೆ. ಅವರಲ್ಲಿ ಮುಂದಿನ ಮುಖ್ಯಮಂತ್ರಿ ಹೋರಾಟಗಳು ಹೆಚ್ಚುತ್ತಿವೆ. ಕಾಂಗ್ರೆಸ್ ನ ಆಂತರಿಕ ಜಗಳ, ಕಚ್ಚಾಟಗಳನ್ನು ಮುಚ್ಚಿಡುವುದಕ್ಕೋಸ್ಕರ ರಾಜ್ಯದಲ್ಲಿ ಬಿಜೆಪಿಯಲ್ಲಿ ಮೂರನೇ ಸಿಎಂ ಆಗಲಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಬಿಜೆಪಿ ಸರಕಾರದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮುಂದಿನ ಪೂರ್ಣಾವಧಿಗೆ ಬಸವರಾಜ ಬೊಮ್ಮಾಯೊಯವರೇ ಸಿಎಂ ಆಗಿರುತ್ತಾರೆ. ಮುಂದಿನ ಚುನಾವಣೆಯನ್ನು ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಬೊಮ್ಮಾಯಿಯವರ ನೇತೃತ್ವದಲ್ಲಿ ಎದುರಿಸಲಿದ್ದೇವೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.
ಗೊಂದಲಗಳನ್ನು ಸೃಷ್ಟಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಇಡಿ ತನಿಖೆಯಲ್ಲಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಪ್ರಕರಣ, ಡಿಕೆಶಿ ವಿರುದ್ಧ ನ್ಯಾಯಾಲಯ ನೀಡಿರುವ ಜಾಮೀನನ್ನು ಮುಚ್ಚಿಡಲು ಕಾಂಗ್ರೆಸ್ ಈ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ನಲ್ಲಿರುವ ಮುಖ್ಯಮಂತ್ರಿ ಗೊಂದಲ, ದಲಿತ ಮುಖ್ಯಮಂತ್ರಿ ಚರ್ಚೆಗಳನ್ನು ಮುಚ್ಚಿಟ್ಟು ಕಾಂಗ್ರೆಸ್ ಅನ್ನು ಉಳಿಸಲು ಟ್ವೀಟ್ ಮೂಲಕ ಗೊಂದಲ ಸೃಷ್ಟಿಸುತ್ತಿದೆ. ಯಾವುದೇ ಗೊಂದಲಗಳಿಗೆ ಎಡೆ ಮಾಡುವ ಸನ್ನಿವೇಶ ಬಿಜೆಪಿಯಲ್ಲಿಲ್ಲ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.