-->
ಸರಕಾರಿ ಶಾಲೆಯ ವಿದ್ಯಾರ್ಥಿಗಳೇ ನಿರ್ಮಿಸುತ್ತಿರುವ 'ಪುನೀತ್' ಉಪಗ್ರಹ ನವೆಂಬರ್-ಡಿಸೆಂಬರ್ ನಲ್ಲಿ ಆಕಾಶಕ್ಕೆ

ಸರಕಾರಿ ಶಾಲೆಯ ವಿದ್ಯಾರ್ಥಿಗಳೇ ನಿರ್ಮಿಸುತ್ತಿರುವ 'ಪುನೀತ್' ಉಪಗ್ರಹ ನವೆಂಬರ್-ಡಿಸೆಂಬರ್ ನಲ್ಲಿ ಆಕಾಶಕ್ಕೆ

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳೇ ನಿರ್ಮಿಸುತ್ತಿರುವ 'ಪುನೀತ್' (ನಟ ಪುನೀತ್ ರಾಜ್‍ಕುಮಾರ್) ಉಪಗ್ರಹವನ್ನು ನ.15 ರಿಂದ ಡಿ.31ರ ನಡುವೆ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ . ಅಶ್ವತ್ಥನಾರಾಯಣ ಹೇಳಿದ್ದಾರೆ. 

ಈ ಉಪಗ್ರಹ ಉಡಾವಣೆ ಯೋಜನೆಯ ಪ್ರಗತಿಯ ಕುರಿತು ವಿಕಾಸಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಈ ಮೂಲಕ ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ ಹಾಗೂ ಆಸಕ್ತಿ ಬೆಳೆಯಬೇಕು. ಅದಕ್ಕಾಗಿ ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲೆ, ವಿಭಾಗೀಯ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಅಂತಿಮವಾಗಿ 1 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉಪಗ್ರಹ ಉಡಾವಣೆ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾಕ್ಕೆ ಕರೆದುಕೊಂಡು ಹೋಗಲಾಗುತ್ತದೆ ಎಂದು ಹೇಳಿದರು. 

ಸ್ಪರ್ಧೆಯ ಅಂಗವಾಗಿ ಪ್ರೌಢಶಾಲಾ ಮಕ್ಕಳಿಗೆ ಆನ್‌ಲೈನ್ ರಸಪ್ರಶ್ನೆ , ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆ, ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಪೋಸ್ಟರ್ ರಚನಾ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ. ಈ ಸಂಬಂಧ ಎಲ್ಲಾ 31 ಜಿಲ್ಲೆಗಳ ಡಿಡಿಪಿಐಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ಪೈಕಿ, ಬೆಂಗಳೂರು ವಲಯದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು 'ಕೆಜಿಎಸ್‌ಸ್ಯಾಟ್' ಉಪಗ್ರಹವನ್ನು 1.90 ಕೋಟಿ ರೂ . ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಮಲ್ಲೇಶ್ವರಂನಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಇವರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ದಿ. ನಟ ಪುನೀತ್ ರಾಜ್‍ಕುಮಾರ್ ಅವರ ಸ್ಮರಣಾರ್ಥ ಈ ಉಪಗ್ರಹಕ್ಕೆ ಅವರದೇ ಹೆಸರನ್ನಿಡಲಾಗಿದೆ. ಪ್ರಧಾನಿಯವರ ಕಾರ್ಯಕ್ರಮದಡಿ ಉಡಾವಣೆಗೊಳ್ಳುತ್ತಿರುವ ದೇಶದ ಪ್ರಥಮ ಉಪಗ್ರಹ ಇದಾಗಿದೆ ಎಂದು ಅವರು ವಿವರಿಸಿದರು.

ವಿದ್ಯಾರ್ಥಿಗಳು ಕೇವಲ ಉಪಗ್ರಹ ಅಭಿವೃದ್ಧಿ ಯೋಜನೆಯಲ್ಲಿ ಪಾಲ್ಗೊಂಡರೆ ಸಾಲದು. ಬದಲಿಗೆ ಬಾಹ್ಯಾಕಾಶ, ಖಗೋಳ ವಿಜ್ಞಾನ, ಅಂತರೀಕ್ಷ ಇತ್ಯಾದಿಗಳ ಬಗ್ಗೆ ತಿಳಿದು ಸಂಭ್ರಮಿಸಬೇಕು ಎನ್ನುವುದು ಸರಕಾರದ ಆಶಯವಾಗಿದೆ. ಆದ್ದರಿಂದ ಸ್ಪರ್ಧಾ ವಿಜೇತರಿಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು‌.

Ads on article

Advertise in articles 1

advertising articles 2

Advertise under the article