ರಸ್ತೆ ಮಧ್ಯೆಯೇ ಕುಳಿತು ಎಣ್ಣೆ ಪಾರ್ಟಿ ಮಾಡಿ, ಪೊಲೀಸರಿಗೆ ಬೆದರಿಕೆಯೊಡ್ಡಿರುವಾತನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್
Friday, August 19, 2022
ಡೆಹ್ರಾಡೂನ್: ಜನನಿಬಿಡ, ವಾಹನನಿಬಿಡ ರಸ್ತೆ ಮಧ್ಯೆಯೇ ಕುಳಿತು ಮದ್ಯ ಪಾರ್ಟಿ ಮಾಡಿದ್ದಲ್ಲದೆ, ಪೊಲೀಸರಿಗೆ ಬೆದರಿಕೆ ಹಾಕಿರುವ ಇನ್ ಸ್ಟಾಗ್ರಾಂ ಇನ್ಸುಯೆನ್ಸರ್ ಬಾಬಿ ಕಟಾರಿಯಾ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಶೀಘ್ರದಲ್ಲಿಯೇ ಈತನ ಬಂಧನವಾಗಲಿದೆ.
ಮಿ.ಕಟಾರಿಯಾ ಜುಲೈ 28 ರಂದು ರಸ್ತೆ ಮಧ್ಯೆಯೇ ಕುಳಿತು ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ. ಈ ವೀಡಿಯೋಗೆ ರಸ್ತೆಯಲ್ಲಿ ಎಂಜಾಯ್ ಮಾಡುವ ಸಮಯವಿದು ಎಂದು ಅಡಿಬರಹ ನೀಡಿದ್ದ. ವೀಡಿಯೋದಲ್ಲಿ ಡೆಹ್ರಾಡೂನ್‌ನ ವಾಹನ ನಿಬಿಡ ರಸ್ತೆಯ ನಡುವೆಯೇ ಕುರ್ಚಿ ಹಾಗೂ ಟೇಬಲ್ ಹಾಕಿಕೊಂಡು ಮಿ.ಕಟಾರಿಯಾ ಕುಳಿತು ಮದ್ಯ ಸೇವಿಸುತ್ತಿರುವ ದೃಶ್ಯವಿದೆ.
ಕಟಾರಿಯಾ ಆಪ್ತರೊಬ್ಬರು ಇದರ ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ರೋಡ್ ಆಫೈ ಬಾಪ್ ಕಿ (ರಸ್ತೆ ನಮ್ಮಪ್ಪನಿಗೆ ಸೇರಿದ್ದು) ಎಂಬ ಹಾಡನ್ನು ವೀಡಿಯೋ ಹಿನ್ನೆಲೆ ಸಂಗೀತವಾಗಿ ಎಡಿಟ್ ಮಾಡಲಾಗಿದೆ. ಈ ವೀಡಿಯೋ ವೈರಲ್ ಆಗಿ ಕ್ರಮಕ್ಕೆ ಒತ್ತಾಯಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಉತ್ತರಾಖಂಡದ ಪೊಲೀಸರು ಭಾರತೀಯ ದಂಡ ಸಂಹಿತೆ ( ಐಪಿಸಿ ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಕಟಾರಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಇದೀಗ ನಾಪತ್ತೆಯಾಗಿರುವ ಮಿ.ಕಟಾರಿಯಾ ಬಂಧನಕ್ಕೆ ಉತ್ತರಾಖಂಡ ಪೊಲೀಸರು ಜಿಲ್ಲಾ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಪಡೆದುಕೊಂಡಿದ್ದಾರೆ. ಆರೋಪಿಯ ಬಂಧನಕ್ಕಾಗಿ ವಿವಿಧ ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದ್ದು, ಹರಿಯಾಣ ಸೇರಿದಂತೆ ವಿವಿಧ ಸ್ಥಳಗಳಿಗೆ ಕಟಾರಿಯಾ ಬಂಧನಕ್ಕಾಗಿ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಗುರುಂಗಾವ್ ಮೂಲದ ಮಿ.ಕಟಾರಿಯಾ ಇನ್‌ಸ್ಟಾಗ್ರಾಂನಲ್ಲಿ 6 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.
ಈ ಹಿಂದೆ ಈತ ಸ್ಟೈಸ್ ಜೆಟ್ ವಿಮಾನದೊಳಗೆ ಧೂಮಪಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆದರೆ, ಅದು ಡಮ್ಮಿ ವಿಮಾನವೆಂದು ಕಟಾರಿಯಾ ಸಮರ್ಥನೆ ನೀಡಿದ್ದರು . ದುಬೈನಲ್ಲಿ ಶೂಟಿಂಗ್ ನಲ್ಲಿದ್ದಾಗ ತೆಗೆದ ಚಿತ್ರವಿದು ಎಂದು ಹೇಳಿದ್ದಾರೆ . ಅಲ್ಲದೆ , ಅದು ಹಳೆಯ ವಿಡಿಯೋ ಎಂದು ಹೇಳಿಕೊಂಡಿದ್ದಾರೆ . ಇದೀಗ ರಸ್ತೆ ಮಧ್ಯೆ ಕುಳಿತ ಮದ್ಯ ಸೇವಿಸಿರುವ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದಾರೆ.