ನವದೆಹಲಿ: ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿನಿಯನ್ನು ತಬ್ಬಿ ಲೈಂಗಿಕ ದೌರ್ಜನ್ಯ ಎಸಗಿದ ಸೆಕ್ಯುರಿಟಿ ಗಾರ್ಡ್; ಚಲ್ಲಿಪಿಲ್ಲಿಯಾಗಿ ಓಡಿದ ಯುವತಿಯರು
Thursday, August 18, 2022
ನವದೆಹಲಿ: ಮಹಿಳಾ ಹಾಸ್ಟೆಲ್‌ವೊಂದರ ಸೆಕ್ಯುರಿಟಿ ಗಾರ್ಡ್ ವಿದ್ಯಾರ್ಥಿನಿಯರನ್ನು ಬೆದರಿಸಿ, ವಿದ್ಯಾರ್ಥಿನಿಯೊಬ್ಬಳನ್ನು ಹಿಂದಿನಿಂದ ತಬ್ಬಿ ಕಿರುಕುಳ ನೀಡುತ್ತಿರುವ ಆಘಾತಕಾರಿ ದೃಶ್ಯವೊಂದು ರಾಷ್ಟ್ರದ ರಾಜಧಾನಿ ದೆಹಲಿಯ ಕರೋಲ್ ಬಾಫ್‌ನಲ್ಲಿರುವ ಹಾಸ್ಟೆಲ್‌ನಲ್ಲಿ ನಡೆದಿದೆ. ಇದರ ದೃಶ್ಯ ಹಾಸ್ಟೆಲ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ಮಧ್ಯ ಪ್ರವೇಶಿಸಿರುವ ದೆಹಲಿ ಮಹಿಳಾ ಆಯೋಗ ಆದಷ್ಟು ಶೀಘ್ರದಲ್ಲಿ ಈ ಬಗ್ಗೆ ವರದಿ ನೀಡುವವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.
ದೆಹಲಿಯ ಗೋಲ್ಡ್ ವಿಲ್ಲಾ ಪೇಯಿಂಗ್ ಗೆಸ್ಟ್ ಹಾಸ್ಟೆಲ್‌ನಲ್ಲಿ ಈ ಭಯಾನಕ ಘಟನೆ ನಡೆದಿದೆ. ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ದಾಖಲಾಗಿದೆ. ಇದರಲ್ಲಿ ವಿದ್ಯಾರ್ಥಿನಿಯರ ಗುಂಪೊಂದು ಮಾತನಾಡಿಕೊಂಡು ನಡೆದುಕೊಂಡು ಬರುತ್ತಿರುತ್ತದೆ. ಕೆಲವೇ ಕ್ಷಣಗಳಲ್ಲಿ ಎಲ್ಲರೂ ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡುತ್ತಾರೆ. ಆಗ ಸೆಕ್ಯುರಿಟಿ ಗಾರ್ಡ್ ವಿದ್ಯಾರ್ಥಿನಿಯೊಬ್ಬಳನ್ನು ಹಿಂದಿನಿಂದ ತಬ್ಬಿಕೊಂಡು ಆಕೆಯ ಮೇಲೆ ದೌರ್ಜನ್ಯ ಎಸಗುತ್ತಿರುವುದು ಕಂಡು ಬರುತ್ತದೆ. ವಿದ್ಯಾರ್ಥಿನಿ ಆತನಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದರೂ ಆತ ಬಿಡದೇ ವಿದ್ಯಾರ್ಥಿನಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಹಿಂಸಿಸುತ್ತಿರುವುದು ಕಂಡು ಬಂದಿದೆ.
ಸಿಸಿಟಿವಿ ಕ್ಯಾಮರಾ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದರೂ ಹಾಸ್ಟೆಲ್‌ನ ಮಾಲಕ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಸೆಕ್ಯುರಿಟಿ ಗಾರ್ಡ್ ನಡೆದುಕೊಂಡಿರುವ ರೀತಿಯನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ . ಈ ವಿಡಿಯೋ ದೆಹಲಿ ಮಹಿಳಾ ಆಯೋಗದ ಗಮನಕ್ಕೂ ಬಂದಿದ್ದು , ವರದಿ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ.