ದುರಂತ ಅಂತ್ಯಗೊಂಡ ಟೆಕ್ಕಿ: ಆಕೆಯ ಡೈರಿ, ಮೊಬೈಲ್ ನಲ್ಲಿತ್ತು ಬಾಯ್ ಫ್ರೆಂಡ್ ರಹಸ್ಯ
Thursday, August 25, 2022
ಭುವನೇಶ್ವರ : ಟೆಕ್ಕಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಒಡಿಶಾದಲ್ಲಿ ನಡೆದಿದ್ದು, ತಮ್ಮ ಪುತ್ರಿಯ ಸಾವಿಗೆ ಆಕೆಯ ಬಾಯ್‌ಫ್ರೆಂಡ್ ಕಾರಣವೆಂದು ಮೃತಳ ಕುಟುಂಬ ಗಂಭೀರ ಆರೋಪ ಮಾಡಿದೆ.
ಒಡಿಶಾದ ಭದ್ರಕ್ ನಿವಾಸಿ ಶ್ವೇತಾ ಉತ್ಕಲ್ ಕುಮಾರಿ ಮೃತಪಟ್ಟ ಟೆಕ್ಕಿ. ಈಕೆಯ ಬಾಯ್‌ಫ್ರೆಂಡ್ ಸೌಮ್ಯಜಿತ್ ಮೊಹಪಾತ್ರ ವಿರುದ್ಧ ಶ್ವೇತಾ ಕುಟುಂಬ ದೂರು ದಾಖಲಿಸಿದೆ.
ಶ್ವೇತಾ ಉತ್ಕಲ್ ಕುಮಾರಿ ಮೃತದೇಹ ಶನಿವಾರ ರಾತ್ರಿ ತನ್ನ ಫ್ಲ್ಯಾಟ್‌ನಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ ಸ್ನೇಹಿತೆ ಫ್ಲ್ಯಾಟ್‌ನಲ್ಲಿ ಇಲ್ಲದಿರುವ ಸಮಯದಲ್ಲಿ ಶ್ವೇತಾ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಇದೀಗ ಆಕೆಯ ಕುಟುಂಬಸ್ಥರು ಶ್ವೇತಾ ಸಾವಿಗೆ ಆಕೆಯ ಬಾಯ್ ಫ್ರೆಂಡ್ ಕಾರಣ ಎಂದು ದೂರು ದಾಖಲಿಸಿದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶ್ವೇತಾಳೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡ ಬಳಿಕ ಆಕೆಯ ಖಾಸಗಿ ಫೋಟೋಗಳನ್ನು ಬಿಡುಗಡೆ ಮಾಡುತ್ತೇನೆಂದು ಬೆದರಿಕೆಯೊಡ್ಡಿದ್ದ. ಇದರಿಂದ ಹೆದರಿದ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬ ದೂರಿನಲ್ಲಿ ಉಲ್ಲೇಖಿಸಿದೆ.
ಫ್ಲ್ಯಾಟ್‌ನಲ್ಲಿ ದೊರೆತ ಶ್ವೇತಾಳ ಮೊಬೈಲ್ ಹಾಗೂ ಡೈರಿಯಿಂದ ಸೌಮ್ಯಜಿತ್ ಜೊತೆಗಿನ ಆಕೆಯ ಸಂಬಂಧದ ಬಗ್ಗೆ ತಿಳಿದುಕೊಂಡಿದ್ದಾರೆ. ಸಾವಿಗೂ ಮುನ್ನ ಶ್ವೇತಾ 15 ಬಾರಿ ಸೌಮ್ಯಜಿತ್‌ಗೆ ಕರೆ ಮಾಡಿದ್ದಾಳೆ. ಆದರೆ, ಆತ ಕರೆಯನ್ನು ಸ್ವೀಕರಿಸಲೇ ಇಲ್ಲ. ಇಬ್ಬರ ನಡುವೆ ನಡೆದಿರುವ ಸಂಭಾಷಣೆಯ ಆಡಿಯೋ ತುಣುಕು ಸಹ ತದನಂತರದಲ್ಲಿ ಬೆಳಕಿಗೆ ಬಂದಿದೆ. ತನ್ನ ಜೀವನದಿಂದ ಆಚೆ ಹೋಗುವಂತೆ ಸೌಮ್ಯಜಿತ್ ಕೇಳಿರುವುದು ಆಡಿಯೋದಲ್ಲಿದೆ.
ಇನ್ನು ಇಬ್ಬರ ಮದುವೆಗೆ ಮಾತುಕತೆಯು ನಡೆದಿತ್ತಂತೆ. ಸೌಮ್ಯಜಿತ್ ಕುಟುಂಬದ ಜೊತೆ ಮದುವೆ ಬಗ್ಗೆ ಮಾತನಾಡಿದಾಗ ಸೌಮ್ಯಜಿತ್ ತಾಯಿ 30 ಲಕ್ಷ ರೂ. ವರದಕ್ಷಿಣೆ ಕೇಳಿದರು ಎಂದು ಆರೋಪ ಮಾಡಿದ್ದಾರೆ.