ಬಂಟ್ವಾಳ: ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರವೆಸಗಿರುವ ಕಾಮುಕ ತಂದೆಗೆ 15ವರ್ಷಗಳ ಕಾರಾಗೃಹ ಶಿಕ್ಷೆ
Friday, September 9, 2022
ಬಂಟ್ವಾಳ: ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕಾಮುಕ ತಂದೆಗೆ 15 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25000ರೂ. ದಂಡವಿಧಿಸಿ ತೀರ್ಪು ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಶೀಘ್ರಪಥ -2) ನ್ಯಾಯಾಲಯ ಆದೇಶಿಸಿದೆ.
ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ದಾವೂದ್ (55) ಶಿಕ್ಷೆಗೊಳಗಾದ ಕಾಮುಕ ತಂದೆ.
ಈತ 2018ರ ಜನವರಿ ತಿಂಗಳಿನಲ್ಲಿ ಬಂಟ್ವಾಳ ತಾಲ್ಲೂಕು ಮೆಲ್ಕಾರ್ ಲಾಡ್ಜ್ ಮತ್ತು ಇರಾ ಗ್ರಾಮದಲ್ಲಿ ತನ್ನ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ್ದ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ವೃತ್ತ ನಿರೀಕ್ಷಕ ಶರಣಗೌಡ ಹಾಗೂ ಟಿ. ಡಿ. ನಾಗರಾಜ್ ರವರು ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣವು ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಶೀಘ್ರಪಥ -2) ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿತ ತಪ್ಪಿತಸ್ಥನೆಂದು ಸಾಬೀತುಗೊಂಡಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ. ಎಮ್. ರಾಧಾಕೃಷ್ಣ ಅರೋಪಿಗೆ 15 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ರವರು ಸಮರ್ಥವಾಗಿ ವಾದ ಮಂಡಿಸಿದ್ದರು.