2-3 ಬಾರಿ ಹೃದಯಾಘಾತಕ್ಕೊಳಗಾದ ಸಚಿವ ಉಮೇಶ್ ಕತ್ತಿ ಆರೋಗ್ಯ ನಿರ್ಲಕ್ಷಿಸಿದರೇ?
Wednesday, September 7, 2022
ಮಂಗಳೂರು: ಆಹಾರ ಹಾಗೂ ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿಯವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಿನ್ನೆ ರಾತ್ರಿ ಮನೆಯಲ್ಲಿದ್ದ ಸಂದರ್ಭದಲ್ಲಿ ಅವರಿಗೆ ರಾತ್ರಿ 10 ಗಂಟೆಯ ವೇಳೆಗೆ ಎದೆನೋವು ಕಾಣಿಸಿಕೊಂಡು ಶೌಚಗೃಹದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಅವರು ಚಿಕಿತ್ಸೆ ಫಲಿಸದೆ ರಾತ್ರಿ 11ರ ವೇಳೆಗೆ ಮೃತಪಟ್ಟಿದ್ದಾರೆ.
1961ರ ಮಾರ್ಚ್ 14ರಂದು ಜನಿಸಿದ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಸದ್ಯ ಆಹಾರ ಹಾಗೂ ಅರಣ್ಯ ಇಲಾಖೆಯ ಸಚಿವರಾಗಿದ್ದರು. ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಹಿರಿಯ ಶಾಸಕರಾಗಿದ್ದರು. ಜನತಾ ಪರಿವಾರದಲ್ಲಿದ್ದ ಉಮೇಶ್ ಕತ್ತಿಯವರು ಬಳಿಕ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಯಡಿಯೂರಪ್ಪರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು.
ಉಮೇಶ್ ಕತ್ತಿಯವರ ತಂದೆ ವಿಶ್ವನಾಥ ಕತ್ತಿಯವರು ವಿಧಾನಸಭೆ ಅಧಿವೇಶನ ನಡೆಯುತ್ತಿದ್ದ ವೇಳೆಯೇ ಹೃದಯಾಘಾತದಿಂದ ನಿಧನರಾಗಿದ್ದರು. ತಂದೆಯ ಮರಣದ ಬಳಿಕ ಉಮೇಶ್ ಕತ್ತಿಯವರು ರಾಜಕೀಯ ಪ್ರವೇಶಿಸಿದ್ದರು. ಉಮೇಶ್ ಕತ್ತಿಯವರಿಗೆ ಈ ಮೊದಲೇ 2-3 ಬಾರಿ ಹೃದಯಾಘಾತವಾಗಿತ್ತು. ಆದರೂ ಅವರು ಅದನ್ನು ನಿರ್ಲಕ್ಷಿಸಿದರು ಎಂಬ ಮಾತು ಅವರ ಆಪ್ತ ವಲಯದಿಂದ ಕೇಳಿ ಬರುತ್ತಿದೆ. ಉಮೇಶ್ ಕತ್ತಿಯವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಬೆಲ್ಲದಬಾಗೇವಾಡಿಯ ತೋಟದಲ್ಲಿ ಇಂದು ಸಂಜೆ ನಡೆಯಲಿದೆ.
ಉಮೇಶ್ ಕತ್ತಿಯವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಸಂತಾಪ ಸೂಚಿಸಿದರು.