ಹೊಸದಿಲ್ಲಿ: ಪಿಟ್ ಬುಲ್ ನಾಯಿಯಿಂದ ದಾಳಿಗೊಳಗಾದ ಬಾಲಕನ ಮುಖಕ್ಕೆ 200 ಹೊಲಿಗೆ
Friday, September 9, 2022
ಹೊಸದಿಲ್ಲಿ: ಕಳೆದ ವಾರ ಗಾಝಿಯಾಬಾದ್‌ನಲ್ಲಿ ಪಿಟ್ ಬುಲ್ ನಾಯಿಯಿಂದ ದಾಳಿಗೊಳಗಾದ 11ರ ಬಾಲಕನ ಮುಖಕ್ಕೆ ಸುಮಾರು 200 ಹೊಲಿಗೆ ಹಾಕಲಾಗಿದೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.
ತನ್ನ ಮನೆಯ ಸಮೀಪದ ಉದ್ಯಾನವನದಲ್ಲಿ ಆಟವಾಡುತ್ತಿದ್ದ 11ರ ಬಾಲಕನ ಮೇಲೆ ನಾಯಿ ದಾಳಿ ನಡೆಸಿರುವ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿದೆ. ಹುಡುಗಿಯೊಬ್ಬಳು ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅದು ಹಠಾತ್ತನೆ ಬಾಲಕನ ಮೇಲೆ ದಾಳಿ ಮಾಡಿದೆ. ಆಗ ಬಾಲಕ ಪುಷ್ಪ ತ್ಯಾಗಿಯ ನೆಲಕ್ಕೆ ಬಿದ್ದಿದ್ದಾನೆ. ಒಬ್ಬ ವ್ಯಕ್ತಿ ಮಗುವನ್ನು ರಕ್ಷಿಸುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಅಷ್ಟೊತ್ತಿಗಾಗಲೇ ಪುಷ್ಪ ತ್ಯಾಗಿಯ ಮುಖದ ಒಂದು ಭಾಗವನ್ನು ನಾಯಿ ಕಚ್ಚಿದೆ.
ಯಾವುದೇ ಪರವಾನಿಗೆ ಅಥವಾ ನೋಂದಣಿಯಿಲ್ಲದೆ ಪ್ರಾಣಿಯನ್ನು ಸಾಕಿದ್ದ ನಾಯಿಯ ಮಾಲೀಕರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಸಾಕುಪ್ರಾಣಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ಬಾಲಕನ ಕುಟುಂಬ ಹಾಗೂ ಆಕ್ರೋಶಗೊಂಡಿರುವ ನಿವಾಸಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳು ಆಟವಾಡಲು ಹೋಗುವ ಉದ್ಯಾನವನಗಳಲ್ಲಿ ಪ್ರಾಣಿಗಳನ್ನು ಬಿಡುವುದು ತಪ್ಪು ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಸಾಕು ನಾಯಿಗಳ ದಾಳಿಯ ಘಟನೆಗಳು ಹೆಚ್ಚುತ್ತಿವೆ ಎಂದು ವರದಿಯಾಗಿದೆ.