
ಮಂಗಳೂರು: ಇಂದು ಪ್ರಧಾನಿ ಮೋದಿ ಕಡಲ ನಗರಿಗೆ: 3,800 ಕೋಟಿ ರೂ. ಮೊತ್ತದ ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ
Friday, September 2, 2022
ಮಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಭೇಟಿಗೆ ಕ್ಷಣಗಣನೆ ಆರಂಭವಾಗಿದೆ. ಮಧ್ಯಾಹ್ನ12.55ಕ್ಕೆ ಕೇರಳದ ಕೊಚ್ಚಿನ್ ನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅವರು ಬಂದಳಿಯಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ, ಕೇಂದ್ರ ಸಚಿವರು, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಿದ್ದಾರೆ.
ಮಂಗಳೂರು ಏರ್ಪೋರ್ಟ್ ನಿಂದ ಮಧ್ಯಾಹ್ನ 1.20ಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿಯವರು ಪಣಂಬೂರಿನಲ್ಲಿರುವ ಎನ್ಎಂಪಿಎ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. ಅಲ್ಲಿಂದ ಮಧ್ಯಾಹ್ನ 1.30ಕ್ಕೆ ಒಂದೂವರೆ ಕಿ.ಮೀ. ದೂರದಲ್ಲಿರುವ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ರಸ್ತೆ ಮಾರ್ಗದ ಮೂಲಕ ಆಗಮಿಸಲಿದ್ದಾರೆ. ಅಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಎನ್ಎಂಪಿಎ, ಎಂಆರ್ ಪಿಎಲ್ ನ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ.
ಪ್ರಧಾನಮಂತ್ರಿಯವರು ಕಾರ್ಯಕ್ರಮದಲ್ಲಿ ಸುಮಾರು 3,800 ಕೋಟಿ ರೂ.ಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಎನ್ಎಂಪಿಎ ಕೈಗೆತ್ತಿಕೊಂಡಿರುವ ಕಂಟೈನರ್‌ಗಳು ಹಾಗೂ ಇತರ ಸರಕುಗಳನ್ನು ನಿರ್ವಹಿಸಲು ಲಂಗರು ನಂ. 14ರ ಯಾಂತ್ರೀಕರಣಕ್ಕಾಗಿ 280 ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಯ ಲೋಕಾರ್ಪಣೆ. ಅಲ್ಲದೆ ಪ್ರಧಾನಿಯವರು ಎನ್ಎಂಪಿಎ ಕೈಗೆತ್ತಿಕೊಂಡಿರುವ ಸುಮಾರು 1000 ಕೋಟಿ ರೂ.ಗಳ ಐದು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಜೊತೆಗೆ ಎಂಆರ್ ಪಿಎಲ್ ನ ಎರಡು ಯೋಜನೆಗಳಾದ ಬಿಎಸ್ ವಿಐ ಉನ್ನತೀಕರಣ ಯೋಜನೆ ಮತ್ತು ಸಮುದ್ರ ನೀರು ಶುದ್ಧೀಕರಣ ಘಟಕವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಸುಮಾರು 1830 ಕೋಟಿ ರೂ.ಗಳ ಬಿಎಸ್-6 ಉನ್ನತೀಕರಣ ಯೋಜನೆಯು ಅತ್ಯಂತ ಶುದ್ಧ ಪರಿಸರ ಸ್ನೇಹಿ ಬಿಎಸ್-6 ಗ್ರೇಡ್ ಇಂಧನ (10 ಪಿಪಿಎಂ ಗಿಂತ ಕಡಿಮೆ ಸಲ್ಫರ್ ಅಂಶವಿರುವ) ಉತ್ಪಾದನೆಗೆ ಅನುವು ಮಾಡಿಕೊಡಲಿದೆ.
ಈ ಕಾರ್ಯಕ್ರಮ ಮಧ್ಯಾಹ್ನ 2.55ರವರೆಗೆ ನಡೆಯಲಿದ್ದು ಅಲ್ಲಿಂದ ಪ್ರಧಾನಿ ಮೋದಿಯವರು ರಸ್ತೆ ಮಾರ್ಗದ ಮೂಲಕ ಎನ್ಎಂಪಿಎಗೆ ಮರಳಲಿದ್ದಾರೆ. ಅಲ್ಲಿ ಒಂದು ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಎನ್ಎಂಪಿಎ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತೆರಳಲಿರುವ ಮೋದಿ ಬಳಿಕ ವಿಶೇಷ ವಿಮಾನದಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.