
ಮಂಗಳೂರು: ದಸರಾಕ್ಕೆ ಮಂಗಳೂರು ತಾಲೂಕಿನ ಶಾಲೆಗಳಿಗೆ 4ದಿನಗಳ ಹೆಚ್ಚುವರಿ ರಜೆ ಘೋಷಣೆ
Saturday, September 24, 2022
ಮಂಗಳೂರು: ದಸರಾ ಹಬ್ಬದ ನಿಮಿತ್ತ ಮಂಗಳೂರು ತಾಲೂಕು ವ್ಯಾಪ್ತಿಗೆ ಅನ್ವಯವಾಗುವಂತೆ ಸೆ.28ರಿಂದ ಅಕ್ಟೋಬರ್ 1ರವರೆಗೆ ಹೆಚ್ಚುವರಿ 4 ದಿನಗಳ ರಜೆಯನ್ನು ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶಿಸಿದ್ದಾರೆ.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಟೋಬರ್ 3 ರಿಂದ 16ರವರೆಗೆ ರಜೆ ಘೋಷಣೆ ಆದೇಶಿಸಲಾಗಿತ್ತು. ಆದರೆ ಸೆ.26 ರಿಂದ ಪ್ರಾರಂಭಗೊಳ್ಳುವ ಮಂಗಳೂರು ದಸರಾ ಮಹೋತ್ಸವಕ್ಕೆ ಪೂರಕವಾಗುವಂತೆ ಸೆ.26 ರಿಂದಲೇ ರಜೆ ನೀಡುವಂತೆ ಪೋಷಕರು, ಜನಪ್ರತಿನಿಧಿಗಳು ಸರಕಾರವನ್ನು ಒತ್ತಾಯಿಸಿದ್ದರು. ಈ ಮನವಿಗೆ ಶಿಕ್ಷಣ ಸಚಿವರು ಪೂರಕವಾಗಿ ಸ್ಪಂದಿಸಿದ್ದು, ಇದೀಗ ರಾಜ್ಯ ಸರಕಾರವು ರಜೆಯ ಪರಿಷ್ಕೃತ ಆದೇಶವನ್ನು ಹೊರಡಿಸಿದೆ.
ಆದ್ದರಿಂದ ಮಂಗಳೂರು ತಾಲೂಕು ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೆ.28ರಿಂದ ಅಕ್ಟೋಬರ್ 1 ರವರೆಗೆ ಹೆಚ್ಚುವರಿ ರಜೆಗಳನ್ನು ಘೋಷಿಸಿದೆ. ಅಕ್ಟೋಬರ್ 2ರ ರವಿವಾರದಂದು ಗಾಂಧಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸುವಂತೆ ಸೂಚಿಸಿದೆ. ಈ ನಾಲ್ಕು ಹೆಚ್ಚುವರಿ ರಜೆಗಳನ್ನು ನವೆಂಬರ್ ತಿಂಗಳಿನ 4 ಶನಿವಾರಗಳ ಪೂರ್ಣ ದಿನದ ತರಗತಿ ಮತ್ತು ಎರಡು ರವಿವಾರಗಳ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ರಜೆಯನ್ನು ಸರಿದೂಗಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.