ಕನ್ನಡದಲ್ಲಿ ಬರೆದಿರುವ ಚೆಕ್ ತಿರಸ್ಕಾರ: ಎಸ್‌ಬಿಐ ಬ್ಯಾಂಕ್ ಗೆ 85,177 ರೂ. ದಂಡ ವಿಧಿಸಿದ ಕೋರ್ಟ್
ಧಾರವಾಡ: ಕನ್ನಡದಲ್ಲಿ ಬರೆದಿರುವ ಬ್ಯಾಂಕ್ ಚೆಕ್ನ್ನು ಅಮಾನ್ಯ ಮಾಡಿರುವ ಕಾರಣಕ್ಕೆ ಧಾರವಾಡದ ಗ್ರಾಹಕರ ವ್ಯಾಜ್ಯಗಳ ಆಯೋಗವು ಎಸ್‌ಬಿಐ ಬ್ಯಾಂಕ್‌ಗೆ 85,177 ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.
ಧಾರವಾಡದ ವಾದಿರಾಜಾಚಾರ್ಯ ಇನಾಮದಾರ್ ಎಂಬುವವರು ಕನ್ನಡದಲ್ಲಿ ಚೆಕ್ನ್ನು ಬರೆದು ವಿದ್ಯುತ್ ಬಿಲ್ ಪಾವತಿಸಿದ್ದರು. ಇದನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಎಸ್‌ಬಿಐ ಬ್ಯಾಂಕ್ ತಿರಸ್ಕರಿತ್ತು. ಚೆಕ್ ಮೂಲಕ ವಾದಿರಾಜಾಚಾರ್ಯರು 6000 ರೂ. ಎಂದು ಕನ್ನಡದಲ್ಲಿ ಬರೆದ ಚೆಕ್ ಮೂಲಕ ವಿದ್ಯುತ್ ಬಿಲ್ ಪಾವತಿಸಿದ್ದರು. ಕನ್ನಡದ ಅಂಕಿಗಳು ತಿಳಿಯದ ಕಾರಣ ಚೆಕ್ ಅಮಾನ್ಯ ಮಾಡಲಾಗಿದೆ. ಪರಿಣಾಮ ವಿದ್ಯುತ್ ಬಿಲ್ ಬಾಕಿ ಉಳಿದಿದ್ದು, ಧಾರವಾಡದ ಕಲ್ಯಾಣ ನಗರ 2ನೇ ಕ್ರಾಸ್‌ನಲ್ಲಿನ ಅವರ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ಚೆಕ್ ಮುಖಾಂತರ ವಿದ್ಯುತ್ ಬಿಲ್ ತುಂಬದಂತೆ ಹೆಸ್ಕಾಂ ನಿರ್ಬಂಧ ಹೇರಿದ್ದು, ನೊಂದ ವಾದಿರಾಜಾಚಾರ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದಾರೆ.
ಇದು ಕನ್ನಡಕ್ಕಾಗಿರುವ ಅವಮಾನ ಎಂದು ಕಾನೂನು ಹೋರಾಟ ಮಾಡಿರುವ ವಾದಿರಾಜಾಚಾರ್ಯ ವೃತ್ತಿಯಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದಾರೆ. ಆದರೆ ಎಲ್ಲಾ ವ್ಯವಹಾರಕ್ಕೂ ಅವರು ಕನ್ನಡ ಬಳಕೆ ಮಾಡುತ್ತಿದ್ದರು. ಕನ್ನಡಕ್ಕಾಗಿ ಕಾನೂನು ಹೋರಾಟ ಮಾಡಿರುವ ಅವರು 8 ತಿಂಗಳ ವಿಚಾರಣೆ ಬಳಿಕ ಗೆಲುವು ಸಾಧಿಸಿದ್ದಾರೆ. ಕನ್ನಡ ಕಡೆಗಣಿಸುವ ಬ್ಯಾಂಕ್‌ಗಳಿಗೆ ಈ ತೀರ್ಪು ಎಚ್ಚರಿಕೆ ಗಂಟೆಯಾಗಬೇಕು. ನಾನು ಇಂಗ್ಲಿಷ್ ಉಪನ್ಯಾಸಕನಾಗಿದ್ದರು, ಕನ್ನಡ ನಮ್ಮ ಆಡಳಿತ ಭಾಷೆ. ಕನ್ನಡಿಗರಾಗಿ ಕನ್ನಡ ಬಳಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.