
ಮಂಗಳೂರು: ಮೋದಿ ಕಾರ್ಯಕ್ರಮಕ್ಕೆ ಇವುಗಳನ್ನು ತರುವಂತಿಲ್ಲ; ಎಡಿಜಿಪಿ ಖಡಕ್ ಎಚ್ಚರಿಕೆ
Thursday, September 1, 2022
ಮಂಗಳೂರು: ಪ್ರಧಾನಿ ಮೋದಿಯವರು ಸೆ.2ರಂದು ಮಂಗಳೂರು ಭೇಟಿಯಾಗಲಿದ್ದು, ಮಧ್ಯಾಹ್ನ 1.30ಕ್ಕೆ ಬಂಗ್ರಕೂಳೂರಿನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಈ ಸಮಾವೇಶಕ್ಕೆ ಬರುವವರು ಬೆಂಕಿಪೊಟ್ಟಣ, ಲೈಟರ್, ಕಪ್ಪು ಬಟ್ಟೆಯನ್ನು ತರುವಂತಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಮೈದಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲದ್ದಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಕಾರ್ಯಕ್ರಮ ನಿರ್ವಹಣೆ ಮಾಡುತ್ತಿರುವ ಕಂಪೆನಿ ಮೇಲೆ ಗರಂ ಆದರು. ಸಮಾವೇಶ ನಡೆಯುವ ಇಷ್ಟು ದೊಡ್ಡ ಮೈದಾನದಲ್ಲಿ ಕೇವಲ ಎರಡೇ ಸಿಸಿ ಕ್ಯಾಮರಾ ಅಳವಡಿಸಿರುವುದನ್ನು ನೋಡಿ ಗರಂ ಆದ ಅಲೋಕ್ ಕುಮಾರ್ ತಕ್ಷಣ ಮೈದಾನದ ಎಲ್ಲಾ ಭಾಗಗಳಿಗೆ ಸಿಸಿಟಿವಿ ಕ್ಯಾಮೆರಾ ಹಾಕಬೇಕೆಂದು ಕಾರ್ಯಕ್ರಮ ನಿರ್ವಹಣೆ ಮಾಡಿದ ಕಂಪೆನಿಗೆ ತಾಕೀತು ಮಾಡಿದರು. ಈ ವೇಳೆ ಭದ್ರತೆಗೆ ನಿಯೋಜಿಸಿರುವ ಪೊಲೀಸರಿಗೂ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದರು.
ಪೊಲೀಸರು ಕಾರ್ಯಕ್ರಮದ ವೇಳೆ ತೀವ್ರ ನಿಗಾ ಇರಿಸಬೇಕು. ಎಲ್ಲಾ ಪೊಲೀಸರ ಕಣ್ಣು ಮೈದಾನದಲ್ಲಿ ಸೇರಿದ ಜನರ ಮೇಲಿರಬೇಕು. ಪೊಲೀಸರು ಭಾಷಣ ಮಾಡುವ ಸಂದರ್ಭದಲ್ಲಿ ಭಾಷಣ ನೋಡೋದು, ಮೊಬೈಲ್ ನಲ್ಲಿ ಫೋಟೋ ತೆಗೆಯೋದು ಮಾಡಬಾರದು. ಕಾರ್ಯಕ್ರಮದಲ್ಲಿ ಬಂದಿರುವವರೊಂದಿಗೆ ಕಿರಿಕ್ ಮಾಡಬಾರದು. ಗೊಂದಲ ಸೃಷ್ಟಿಯಾದಲ್ಲಿ ಪೊಲೀಸರು ಯಾರ ಮೇಲೂ ಕೈ ಮಾಡುವಂತಿಲ್ಲ. ಕೇವಲ ಅವರ ಕೈಯನ್ನು ಹಿಂದೆ ಕಟ್ಟಿ, ಬಾಯಿ ಮುಚ್ಚಿಸಿ ವ್ಯಾನ್ ಹತ್ತಿರ ಕರೆತರಬೇಕು. ಕಾರ್ಯಕ್ರಮಕ್ಕೆ ಬರುವವರ ತಪಾಸಣೆ ಬಿಗಿಯಾಗಿ ಮಾಡಬೇಕು. ಶೂ ಸಹಿತ ಸಂಪೂರ್ಣ ತಪಾಸಣೆ ಮಾಡಬೇಕೆಂದು ಪೊಲೀಸರಿಗೆ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಸೂಚನೆ ನೀಡಿದರು.