ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ `ದೃವ್ಯಗುಣ ವಿಜ್ಞಾನದ ಕುರಿತು ಸಿಎಂಈ’
Tuesday, September 13, 2022
ಮೂಡುಬಿದಿರೆ: ನಾವೆಲ್ಲ ಸೇರಿ ಆಯುರ್ವೇದವನ್ನು ಜಗತ್ತಿನ ಮೂಲ ಚಿಕಿತ್ಸಾ ಕ್ರಮವಾಗಿ ಮಾಡುವತ್ತಾ ಶ್ರಮಿಸಬೇಕು ಎಂದು ದೆಹಲಿಯ ಮೆಡಿಕಲ್ ಅಸ್ಸೆಸ್ಸ್ಮೆಂಟ್ ಆ್ಯಂಡ್ ರೇಟಿಂಗ್ ಬೋರ್ಡ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ನ ಅಧ್ಯಕ್ಷ ಡಾ. ರಘುರಾಮ ಭಟ್ಟ.ಯು. ಹೇಳಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ದ್ರವ್ಯಗುಣ ವಿಜ್ಞಾನ ವಿಭಾಗವು ಹಮ್ಮಿಕೊಂಡಿದ್ದ ಆರು ದಿನದ ‘ಸಿಎಂಈ ಆನ್ ದ್ರವ್ಯಗುಣ ವಿಜ್ಞಾನ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಯುರ್ವೇದದ ಜ್ಞಾನವನ್ನು ಸಂಸ್ಕೃತ ಭಾಷೆಯಲ್ಲಿ ಅರ್ಥೈಸಿಕೊಂಡಾಗ ನಮ್ಮಲ್ಲಿ ವಿಶ್ವಾಸ ಮೂಡುತ್ತದೆ. ಸಂಸ್ಕೃತ ಭಾಷೆಯಲ್ಲಿ ಆಯುರ್ವೇದದ ಜ್ಞಾನವನ್ನು ಪಡೆಯುವುದು ಸೂರ್ಯನಿಂದ ನೇರವಾಗಿ ಬೆಳಕನ್ನು ಪಡೆದಂತೆ ಹಾಗು ಅನುವಾದದ ಭಾಷೆಯಲ್ಲಿ ಪಡೆಯುವುದು ಚಂದ್ರನಿಂದ ಬೆಳಕನ್ನು ಪಡೆದಂತೆ ಎಂದರು.
ಆಯುರ್ವೇದದ ಶ್ಲೋಕ ಹಾಗೂ ಶಾಸ್ತ್ರಗಳ ಅಧ್ಯಯನ ಈ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆಯಲು ಸಾಧ್ಯ. ವೈದ್ಯ ವೃತ್ತಿಗೆ ತೊಡಗುವ ಮುನ್ನ ನಾವು ನಮ್ಮಲ್ಲಿರುವ ಜ್ಞಾನವನ್ನು ಪರಿಶೀಲಿಸಿ, ಆ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯವನ್ನು ಪಡೆದುಕೊಂಡು ಹೋಗುವುದು ಉತ್ತಮ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಲ್ಲಿ ಅಡಗಿರುವ ಜ್ಞಾನವನ್ನು ಕರಗತ ಮಾಡಿಕೊಂಡು ಈ ಮನುಕುಲಕ್ಕೆ ಹಾನಿಕಾರಕ ರಹಿತ ವೈದ್ಯ ಪದ್ದತಿಯನ್ನು ನೀಡಬೇಕು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ವಹಿಸಿದ್ದರು.
ವೇದಿಕೆಯಲ್ಲಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಸಜಿತ್ ಎಂ.ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ರವಿಪ್ರಸಾದ್ ಹೆಗ್ಡೆ, ಹಾಗು ದ್ರವ್ಯಗುಣ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ ಸುಬ್ರಮಣ್ಯ ಪದ್ಯಾಣ ಉಪಸ್ಥಿತರಿದ್ದರು.
ಆಳ್ವಾಸ್ ಕಾಲೇಜಿನ ರೋಗ ನಿದಾನ ವಿಭಾಗದ ಪ್ರಾಧ್ಯಾಪಕಿ ಡಾ. ಗೀತಾ.ಬಿ. ಮಾರ್ಕಂಡೇ ನಿರೂಪಿಸಿದರು. ಪ್ರಾಂಶುಪಾಲ ಡಾ. ಸಜಿತ್ ಎಂ ಸ್ವಾಗತಿಸಿದರು. ಡಾ ಪ್ರಥ್ವಿ ಪ್ರಾರ್ಥಿಸಿದರು.