ಗಣೇಶ ವಿಸರ್ಜನೆಯಲ್ಲಿ ನಡೆದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯ: ಕಾಲೇಜು ವಿದ್ಯಾರ್ಥಿಗಳು ಅರೆಸ್ಟ್
Sunday, September 11, 2022
ಬೆಳಗಾವಿ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ನಡೆದ ವಾಗ್ವಾದವೊಂದು ಯುವಕನ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ.
ಮುಗಳಿಹಾಳ ಗ್ರಾಮದ ನಿವಾಸಿ ಅರ್ಜುನ ಗೌಡ ಪಾಟೀಲ್ ( 20 ) ಹತ್ಯೆಯಾದ ಯುವಕ. ಓರ್ವ ಅಪ್ರಾಪ್ತ ಸೇರಿದಂತೆ ಉದಯ ಭಂಡೋಲಿ (21) , ಸುಭಾಷ ಸೋಲಣ್ಣವರ (21) ವಿಠಲ ಮೀಶಿ (20) ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಜಗಳ ಉಂಟಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಅರ್ಜುನಗೌಡ ಪಾಟೀಲ್ ಗೆ ಚೂರಿ ಇರಿತವಾಗಿದೆ. ಅರ್ಜುನ ಗೌಡ ಕುಸಿದು ಬೀಳ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಇವರೊಳಗಿನ ವೈಷಮ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.