ಮುಂಬೈ: ಎಫ್ ಬಿಯಲ್ಲಿ ಅಮೃತಾ ಫಡ್ನವೀಸ್ ವಿರುದ್ಧ ಅಶ್ಲೀಲ, ಅವಹೇಳಕಾರಿ ಸಂದೇಶ: ಮಹಿಳೆ ಅರೆಸ್ಟ್
ಮುಂಬೈ: ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಫೇಸ್ ಬುಕ್ ಪೇಜ್ ನಲ್ಲಿ ಅವಹೇಳನಕಾರಿ ಮತ್ತು ಅಶ್ಲೀಲವಾಗಿ ಕಮೆಂಟ್ ಹಾಕಿರುವ ಆರೋಪದಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ಮಹಿಳೆ ಸ್ಮೃತಿ ಪಚಾಲ್ ಎಂದು ತಿಳಿದು ಬಂದಿದೆ. ಈಕೆ ಕಳೆದ ಎರಡು ವರ್ಷಗಳಿಂದ ಅಮೃತಾ ಫಡ್ನವೀಸ್ ಅವರ ಅಧಿಕೃತ ಸಾಮಾಜಿಕ ಜಾಲತಾಣದ ಪುಟದಲ್ಲಿ ವಿವಿಧ ನಕಲಿ ಫೇಸ್ ಬುಕ್ ಗಳ ಮೂಲಕ ಆಕ್ಷೇಪಾರ್ಹ ಕಮೆಂಟ್ ಪೋಸ್ಟ್ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಮೃತಿ ಪಾಂಚಾಲ್ 13 ಜಿ ಮೇಲ್ ಖಾತೆ ತೆರೆದಿದ್ದು, 53 ನಕಲಿ ಫೇಸ್ ಬುಕ್ ಐಡಿ ಹೊಂದಿದ್ದಾಳೆ ಎಂದು ಪೊಲೀಸ್ ತನಿಖೆ ತಿಳಿದು ಬಂದಿದೆ. ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸಿದಾಗ ಐಡಿ ಪತ್ತೆ ಹಚ್ಚಿ ಪಾಂಚಾಲ್ ಅವರನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ. ಸ್ಮೃತಿ ಪಾಂಚಾಲ್ ಅನ್ನು ಗುರುವಾರದವರೆಗೆ ನ್ಯಾಯಾಲಯವು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ಅಮೃತಾ ಫಡ್ನವೀಸ್ ಅವರ ವಿರುದ್ಧ ಅಶ್ಲೀಲ, ಆಕ್ಷೇಪಾರ್ಹ ಕಮೆಂಟ್ ಪೋಸ್ಟ್ ಮಾಡಿರುವ ಹಿಂದಿನ ಉದ್ದೇಶದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.