
ಉಳ್ಳಾಲ: ಸಿಟಿ ಬಸ್ ನಿರ್ಲಕ್ಷ್ಯ ಸಂಚಾರಕ್ಕೆ ವಿದ್ಯಾರ್ಥಿ ಬಲಿ; ಬಸ್ ಚಾಲಕ, ನಿರ್ವಾಹಕ ಅರೆಸ್ಟ್
Monday, September 19, 2022
ಉಳ್ಳಾಲ: ಇಲ್ಲಿನ ಖಾಸಗಿ ಬಸ್ ನ ಅತಿಯಾದ ವೇಗ ಹಾಗೂ ರಶ್ ಗೆ ಫುಟ್ ಬೋರ್ಡ್ ನಲ್ಲಿ ನೇತಾಡುತ್ತಿದ್ದ ವಿದ್ಯಾರ್ಥಿಯೋರ್ವನು ಬಲಿಯಾಗಿದ್ದಾನೆ. ಇದೀಗ ನಿರ್ಲಕ್ಷ್ಯದ ಆರೋಪದ ಮೇಲೆ ಪೊಲೀಸರು ಬಸ್ ಸಹಿತ ಚಾಲಕ, ನಿರ್ವಾಹಕನನ್ನು ಬಂಧಿಸಿದ್ದಾರೆ.
ಉಳ್ಳಾಲ ನಿವಾಸಿ ತ್ಯಾಗರಾಜ್ ಹಾಗೂ ಮಮತಾ ಕರ್ಕೇರ ದಂಪತಿಯ ಪುತ್ರ ಯಶ್ ರಾಜ್(16) ಸೆ.7ರಂದು ಖಾಸಗಿ ಸಿಟಿ ಬಸ್ ನಲ್ಲಿ ಸಂಚರಿಸುತ್ತಿದ್ದರು. ಬಸ್ ಉಳ್ಳಾಲ ನೇತ್ರಾವತಿ ಸೇತುವೆಯ ಬಳಿ ಬರುತ್ತಿರುವಾಗ ರಶ್ ಇದ್ದ ಕಾರಣ ಫುಟ್ ಬೋರ್ಡ್ ನಲ್ಲಿ ನೇತಾಡುತ್ತಿದ್ದ ಯಶ್ ರಾಜ್ ಹೊರಗೆ ಎಸೆಯಲ್ಪಟ್ಟಿದ್ದಾರೆ. ಪರಿಣಾಮ ತಲೆಯ ಭಾಗಕ್ಕೆ ತೀವ್ರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಯಶ್ ರಾಜ್ ಮೆದುಳು ಡೆಡ್ ಆಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪುತ್ರನನ್ನು ಕಳಕೊಂಡ ದುಃಖದ ಮಧ್ಯೆಯೂ ಹೆತ್ತವರು ಅಂಗಾಂಗ ದಾನ ಮಾಡಿದ್ದಾರೆ. ಪುತ್ರನ ಸಾವಿಗೆ ಕಾರಣವಾದ ಖಾಸಗಿ ಬಸ್ ನ ವಿರುದ್ಧ ಕ್ರಮಕ್ಕೆ ದ.ಕ. ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ದೂರು ನೀಡಿದ್ದು ಇಂದು ಬಸ್ಸಿನ ಚಾಲಕ ಕಾರ್ತಿಕ್ ಶೆಟ್ಟಿ, ನಿರ್ವಾಹಕ ಶಂಶೀರ್ ನನ್ನು ಹಾಗೂ ನಿರ್ವಾಹಕನನ್ನು ಬಂಧಿಸಲಾಗಿದೆ.
ನಿರ್ಲಕ್ಷ್ಯ ಮತ್ತು ಅತೀ ವೇಗ ಬಸ್ ಸಂಚಾರದಿಂದಲೇ ಯಶ್ ರಾಜ್ ಸಾವನ್ನಪ್ಪಿದ್ದಾರೆ. ಪುಟ್ ಬೋರ್ಡ್ ನಲ್ಲಿ ಪ್ರಯಾಣಿಕರ ತುಂಬಿಸಿ ನಿರ್ಲಕ್ಷ್ಯ ತೋರುತ್ತಾರೆ ಎಂದು ಯಶ್ ರಾಜ್ ಕುಟುಂಬಸ್ಥರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಮಂಗಳೂರು ಸೌತ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇಂದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಯಶ್ ರಾಜ್ ಓರ್ವನೇ ಪುತ್ರನಾಗಿದ್ದು, ಆತನ ತಂಗಿ ಐದನೇ ಕ್ಲಾಸ್ ವ್ಯಾಸಂಗ ಮಾಡುತ್ತಿದ್ದಾಳೆ. ಯಶ್ ರಾಜ್ ಅಕಾಲಿಕ ಮರಣ ಹೆತ್ತವರು, ಸಂಬಂಧಿಕರನ್ನು ಶೋಕದಲ್ಲಿ ಮುಳುಗಿಸಿದ್ದರೂ, ಅಂಗಾಂಗ ಕಸಿ ಮಾಡುವ ಮತ್ತೊಬ್ಬರ ಜೀವ ಉಳಿಸುವಲ್ಲಿ ಸಾರ್ಥಕತೆ ಮೆರೆಯಲಾಗಿದೆ.