ನೇಣುಬಿಗಿದ ಸ್ಥಿತಿಯಲ್ಲಿ ದಲಿತ ಸಹೋದರಿಯರ ಮೃತದೇಹ ಪತ್ತೆ: ಅತ್ಯಾಚಾರ, ಕೊಲೆ ಆರೋಪದಲ್ಲಿ ನಾಲ್ವರು ಅರೆಸ್ಟ್
Thursday, September 15, 2022
ಲಖಿಂಪುರ್ ಖೇರಿ: ಮರವೊಂದಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತ ದಲಿತ ಸಹೋದರಿಯರ ಮೃತದೇಹಗಳು ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್‌ನಲ್ಲಿ ಬುಧವಾರ ನಡೆದಿದ್ದು, ಇದು ಸ್ಥಳೀಯರಿಗೆ ಆಘಾತವನ್ನು ತಂದಿದೆ.
ಈ ಘಟನೆಯ ಬಗ್ಗೆ ಮೃತಪಟ್ಟ ಸಹೋದರಿಯರ ತಾಯಿ ನೀಡಿರುವ ದೂರಿನನ್ವಯ ನಾಲ್ವರು ಆರೋಪಿಗಳನ್ನು ಬಂಧಿಸಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇಬ್ಬರ ಮೃತದೇಹಗಳು ಪತ್ತೆಯಾಗುವ ಮೂರು ಗಂಟೆಗಳಿಗೆ ಮುನ್ನ ಅವರಿಬ್ಬರನ್ನು ಅಪಹರಿಸಲಾಗಿತ್ತು ಬೈಕ್‌ನಲ್ಲಿ ಬಂದು ಮೂವರು ಯುವಕರು ತನ್ನ ಮಕ್ಕಳನ್ನು ಬಲವಂತಾಗಿ ಕರೆದೊಯ್ದಿದ್ದರು ಎಂದು ಸಂತ್ರಸ್ತೆಯರ ತಾಯಿ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಓರ್ವನ ಹೆಸರು ಹಾಗೂ ಮೂವರು ಅಪರಿಚಿತರೆಂದು ಉಲ್ಲೇಖಿಸಲಾಗಿದೆ. ಇದೀಗ ನಾಲ್ವರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಯುವಕರು ಮಕ್ಕಳನ್ನು ಬೈಕ್‌ನಲ್ಲಿ ಬಲವಂತವಾಗಿ ಕರೆದೊಯ್ಯುವಾಗ ತಡೆಯುವ ಪ್ರಯತ್ನ ಮಾಡಿದೆ. ಆದರೆ , ತನ್ನ ಮೇಲೆ ಯುವಕರು ಹಲ್ಲೆ ಮಾಡಿ ಕರೆದೊಯ್ದಿದ್ದಾರೆ. ಮಕ್ಕಳಿಗಾಗಿ ಬಹಳ ಹುಡುಕಾಡಿದ ಬಳಿಕ ಕಬ್ಬಿನ ಗದ್ದೆಯ ಸಮೀಪದ ಮರವೊಂದರಲ್ಲಿ ಇಬ್ಬರು ಮೃತದೇಹಗಳು ನೇತಾಡುತ್ತಿರುವುದನ್ನು ನೋಡಿದೆವು. ತನ್ನ ಮಕ್ಕಳನ್ನು ಅತ್ಯಾಚಾರ ಮಾಡಿ , ಕೊಲೆಗೈದಿದ್ದಾರೆ ಎಂದು ಸಂತ್ರಸ್ತೆಯರ ತಾಯಿ ಆರೋಪ ಮಾಡಿದ್ದಾರೆ.
ಸಹೋದರಿಯರಿಬ್ಬರ ದುಪಟ್ಟಗಳಿಂದಲೇ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಆದರೆ ಅವರ ಮೈಮೇಲೆ ಗಾಯಗಳು ಗೋಚರವಾಗಿಲ್ಲ. ಮೃತದೇಹ ಪರೀಕ್ಷೆಗಾಗಿ ಮೃತದೇಹವನ್ನು ತರಲು ಸಂತ್ರಸ್ತೆಯರ ಮನೆಗೆ ಹೋದಾಗ ಪೊಲೀಸರನ್ನು ಗ್ರಾಮಸ್ಥರ ತಡೆದಿದ್ದಾರೆ. ಅಲ್ಲದೆ , ಪೊಲೀಸರು ಬರದಂತೆ ರಸ್ತೆ ಬ್ಲಾಕ್ ಮಾಡಿಯೂ ಪ್ರತಿಭಟನೆ ನಡೆಸಿದ್ದಾರೆ. ಕೊನೆಗೂ ಗ್ರಾಮಸ್ಥರ ಮನವೊಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಲಕ್ಷ್ಮಿ ಸಿಂಗ್ ತಿಳಿಸಿದ್ದಾರೆ.