ಶಾಲೆಯ ಬಸ್ ನೊಳಗೆ ಉಸಿರುಗಟ್ಟಿ ನಾಲ್ಕರ ಬಾಲಕಿ ಮೃತ್ಯು ಪ್ರಕರಣ: ನರ್ಸರಿ ಶಾಲೆ ಮುಚ್ಚಲು ಕತಾರ್ ಸರಕಾರ ಆದೇಶ
Thursday, September 15, 2022
ದೋಹಾ: ಶಾಲಾ ವಾಹನದಲ್ಲಿಯೇ 4 ವರ್ಷದ ಬಾಲಕಿ ಉಸಿರುಗಟ್ಟಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಖಾಸಗಿ ನರ್ಸರಿ ಶಾಲೆಯನ್ನು ಮುಚ್ಚಲು ಆದೇಶ ನೀಡಲಾಗಿದೆ.
ಮಿನ್ಸಾ ಮರಿಯಮ್ ಜಾಕೋಬ್ (4) ಮೃತಪಟ್ಟ ದುರ್ದೈವಿ ಬಾಲಕಿ. ಬಾಲಕಿ ಕೇರಳ ಮೂಲದ ಅಭಿಲಾಷ್ ಜಾಕೋಬ್ ಹಾಗೂ ಸೌಮ್ಯಾ ದಂಪತಿಯ ಎರಡನೆಯ ಪುತ್ರಿ. ಸೆಪ್ಟೆಂಬರ್ 11ರಂದು ಮಿನ್ಸಾ ಹುಟ್ಟುಹಬ್ಬ. ಅದೇ ದಿನವೇ ಆಕೆ ಕತಾರ್ ನ ಶಾಲಾ ಬಸ್‍ನಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾಳೆ. ಈ ಸಂಬಂಧ ಕತಾರ್ ನ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವಾಲಯವು ಖಾಸಗಿ ನರ್ಸರಿ ಶಾಲೆಯನ್ನು ಮುಚ್ಚಲು ಆದೇಶ ಹೊರಡಿಸಿದೆ. ಪ್ರಾಥಮಿಕ ತನಿಖೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಕತಾರ್ ನ ವಕ್ರಾದ ಶಿಶು ವಿಹಾರದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಿನ್ಸಾ, ಅದೇ ಶಾಲೆಯ ಬಸ್‍ನಲ್ಲಿಯೇ ಬಂಧಿಯಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಆಕೆ ರವಿವಾರ ಬೆಳಗ್ಗೆ ತನ್ನ ಶಾಲಾ ಬಸ್‍ನಲ್ಲಿ ಶಾಲೆಗೆ ಹೋಗಿದ್ದಳು. ಹಿಂದೆ ಕುಳಿತಿದ್ದ ಆಕೆ ದಾರಿ ಮಧ್ಯೆಯೇ ನಿದ್ದೆ ಮಾಡಿದ್ದಾಳೆ. ಆದರೆ ಆಕೆ ನಿದ್ದೆ ಮಾಡಿದ್ದನ್ನು ಬಸ್ (Bus) ಸಿಬ್ಬಂದಿ ಯಾರೂ ಗಮನಿಸಿರಲಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಯಲ್ಲಿ ಇಳಿಸಿದ ಸಿಬ್ಬಂದಿ, ಶಾಲಾ ವಾಹನವನ್ನು ಬಿಟ್ಟು ಹೋಗಿದ್ದಾರೆ.
ಮಧ್ಯಾಹ್ನ ತರಗತಿಗಳು ಮುಗಿದ ಬಳಿಕ ಚಾಲಕ ಹಾಗೂ ನಿರ್ವಾಹಕ ಮಕ್ಕಳನ್ನು ಅವರ ಮನೆಗೆ ಬಿಡಲು ಹಿಂದಿರುಗಿದ ವೇಳೆ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ವಕ್ರಾ ಆಸ್ಪತ್ರೆಗೆ ಕರೆದೊಯ್ದರೂ ಆಕೆ ಬದುಕಿ ಬರಲೇ ಇಲ್ಲ. ಶಾಲೆಯಲ್ಲಿ ಮಕ್ಕಳನ್ನು ಇಳಿಸಿ ಡ್ರೈವರ್ ಹಾಗೂ ನಿರ್ವಾಹಕ ಬಾಗಿಲು - ಕಿಟಕಿ ಮುಚ್ಚಿದ್ದಾರೆ. ಆದ್ದರಿಂದ ನಿದ್ದೆಗೆ ಜಾರಿದ್ದ ಬಾಲಕಿಗೆ ಉಸಿರಾಡಲು ಸಾಧ್ಯವಾಗಿಲ್ಲ.
ಕತಾರ್ ನಾದ್ಯಂತ ಗರಿಷ್ಠ ತಾಪಮಾನವು 36 ಡಿಗ್ರಿ ಸೆಲ್ಸಿಯಸ್ ಮತ್ತು 43 ಡಿಗ್ರಿ ಸೆಲ್ಸಿಯಸ್ ನಡುವೆ ಇತ್ತು ಎಂದು ಕತಾರ್ ಟ್ರಿಬ್ಯೂನ್ ವರದಿ ಮಾಡಿದೆ. ಇಂತಹ ವಾತಾವರಣದಲ್ಲಿ ಬಿಸಿಯಲ್ಲಿ ಬಾಲಕಿ 4 ಗಂಟೆಗಳ ಕಾಲ ಉಸಿರಾಡಲಾಗದೇ ಒದ್ದಾಡಿದ್ದಾಳೆ ಎನ್ನಲಾಗಿದೆ.