ತುಮಕೂರು: ಮದ್ಯದ ನಶೆಯೇರಿಸಿ ಶಾಲೆಗೆ ಬರುತ್ತಿದ್ದ ಶಿಕ್ಷಕಿ ಅಮಾನತು
Friday, September 9, 2022
ತುಮಕೂರು: ಮದ್ಯಪಾನ ಮಾಡಿಕೊಂಡು ಶಾಲೆಗೆ ಬಂದು, ನಶೆಯಲ್ಲಿ ವಿದ್ಯಾರ್ಥಿಗಳಿಗೆ ಹೊಡೆದು - ಬಡಿದು ಹಾಗೂ ಇತರ ಶಿಕ್ಷಕರಿಗೂ ತೊಂದರೆ ನೀಡುತ್ತಿದ್ದ ಶಿಕ್ಷಕಿ ಮದ್ಯದ ಬಾಟಲಿ ಸಹಿತ ಸಿಕ್ಕಿಹಾಕಿಕೊಂಡಿದ್ದು, ಆಕೆಯನ್ನು ಅಮಾನತುಗೊಳಿಸಿರುವ ಘಟನೆ ತುಮಕೂರು ತಾಲೂಕಿನ ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಇಲ್ಲಿನ ಮದ್ಯವ್ಯಸನಿ ಶಿಕ್ಷಕಿ ಗಂಗಲಕ್ಷಮ್ಮ ಎಂಬಾಕೆಯೇ ಅಮಾನತುಗೊಂಡಾಕೆ. ಈಕೆ ಮದ್ಯದ ಮತ್ತಿನಲ್ಲಿ ವಿದ್ಯಾರ್ಥಿಗಳಿಗೆ ಹೊಡೆಯುತ್ತಾಳೆ ಇತರ ಶಿಕ್ಷಕರಿಗೆ ತೊಂದರೆ ನೀಡುತ್ತಿದ್ದಾಳೆ ಎಂಬ ಆರೋಪ ಕೇಳಿ ಬಂದಿತ್ತು . ಕಳೆದ 25 ವರ್ಷಗಳಿಂದ ಈಕೆ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ಬಿಇಒ ಹನುಮನಾಯ್ಕ ಶಾಲೆಗೆ ಭೇಟಿ ನೀಡಿದ್ದರು. ಈ ಸಂದರ್ಭ ಗಂಗಲಕ್ಷ್ಮಮ್ಮಳ ಕೊಠಡಿಯಲ್ಲಿ ಒಂದು ಫುಲ್ ಬಾಟಲ್ ಮದ್ಯ ಹಾಗೂ ಎರಡು ಖಾಲಿ ಬಾಟಲಿಗಳು ಸಿಕ್ಕಿವೆ.
ಮೊದಲು ಗಂಗಲಕ್ಷ್ಮಮ್ಮ ತನ್ನ ಡ್ರಾಯರ್ ತೆರೆಯಲು ಅಡ್ಡಿಪಡಿಸಿದ್ದಳು. ಆದರೆ ಗ್ರಾಮಸ್ಥರ ಸಮ್ಮುಖದಲ್ಲಿ ಡ್ರಾಯರ್ ಬೀಗ ಒಡೆದು ತೆಗೆದಾಗ ಮದ್ಯದ ಬಾಟಲಿ ದೊರಕಿದೆ. ಮದ್ಯದ ಬಾಟಲಿ ಪತ್ತೆಯಾಗುತ್ತಿದ್ದಂತೆ ಆತ್ಮಹತ್ಯೆಯ ಡ್ರಾಮಾ ಮಾಡಿದ ಶಿಕ್ಷಕಿ, ಶಾಲೆ ಕೊಠಡಿಯ ಬಾಗಿಲು ಹಾಕಿಕೊಂಡು ಬೆದರಿಕೆಯೊಡ್ಡಿದ್ದಳು. ಆದರೆ ಆ ಬಳಿಕ ಆಕೆಯನ್ನು ಹೊರಗೆ ಕರೆತಂದು ಅಮಾನತುಗೊಳಿಸಲಾಗಿದೆ.