ಅಲಯನ್ಸ್ ವಿವಿ ವಿವಾದಿತ ಆಸ್ತಿ ಮಾರಾಟಕ್ಕೆ ಯತ್ನಿಸಿ ಗಲಾಟೆ: ನಟಿ ಶ್ರೀಲೀಲಾ ತಾಯಿ ಮೇಲೆ ಎಫ್ಐಆರ್
Thursday, September 15, 2022
ಆನೇಕಲ್: ರಾಜಕಾರಣಿಯೋರ್ವರಿಗೆ ಅಲಯನ್ಸ್ ವಿವಿಯ ವಿವಾದಿತ ಆಸ್ತಿಯನ್ನು ಮಾರಾಟ ಮಾಡಲೆತ್ನಿಸಿ ಯೂನಿವರ್ಸಿಟಿಯೊಳಗಡೆ ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡಿರುವ ಆರೋಪದ ಮೇಲೆ ಸ್ಯಾಂಡಲ್‌ವುಡ್ ಸ್ಟಾರ್ ನಟಿ ಶ್ರೀಲೀಲಾ ಅವರ ತಾಯಿ ಡಾ.ಸ್ವರ್ಣಲತಾ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಈಕೆ ನೂರಾರು ಕೋಟಿ ರೂ. ವ್ಯವಹಾರ ಕುದುರಿಸಲು ಹೋಗಿ ಪೊಲೀಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಡಾ.ಸ್ವರ್ಣಲತಾ ಖ್ಯಾತ ರಾಜಕಾರಣಿಗೆ ಅಲಯನ್ಸ್ ವಿವಿ ಮಾರಾಟ ಮಾಡಿಸಲು ಮುಂದಾಗಿದ್ದು, ಈಗಾಗಲೇ ಯೂನಿವರ್ಸಿಟಿಯಿಂದ ಹೊರಬಿದ್ದಿರುವ ಮಧುಕರ್ ಅಂಗೂರ್‌ರಿಂದ ಯುನಿವರ್ಸಿಟಿಯ ಆಸ್ತಿ ಮಾರಾಟಕ್ಕೆ ಡೀಲ್ ಕುದುರಿಸಿದ್ದರು. ಆದರೆ, ಸೆಷನ್ಸ್ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಮಧುಕರ್‌ರನ್ನು ಯೂನಿವರ್ಸಿಟಿಯಿಂದ ಹೊರಹಾಕಲಾಗಿತ್ತು. ಮಧುಕರ್ ಅಂಗೂರ್‌ನಿಂದ ರಾಜಕಾರಣಿಗೆ ವಿವಿ ಮಾರಾಟದ ಡೀಲ್ ಕುದುರಿತ್ತು. ಆದರೆ , ಅಲಯನ್ಸ್ ಯುನಿವರ್ಸಿಟಿ ಮಾತ್ರ ಮಧುಕರ್ ಅಂಗೂರ್ ವಶದಲ್ಲಿ ಇರಲಿಲ್ಲ.
ಇದರ ನಡುವೆ ಕೆಲ ಗೂಂಡಾಗಳನ್ನು ಜೊತೆಗೆ ಕರೆತಂದು ಯೂನಿವರ್ಸಿಟಿ ಒಳಗೆ ನುಗ್ಗಿ, ಮಧುಕರ್ ಹಾಗೂ ಸ್ವರ್ಣಲತಾ ಗಲಾಟೆ ಮಾಡಿರುವ ಆರೋಪ ಕೇಳಿಬಂದಿದೆ. ಸೆ.10 ರಂದು ಬೆಳಗ್ಗೆ 11 ಗಂಟೆಗೆ ಯುನಿವರ್ಸಿಟಿ ಅಡ್ಮಿನ್ ಬ್ಲಾಕ್ ಪ್ರವೇಶಿಸಿ ಗಲಾಟೆ ಮಾಡಿದ್ದಾರೆಂದು ಹೇಳಲಾಗಿದೆ. ಗುಂಪು ಕಟ್ಟಿಕೊಂಡು ಬಂದಿರುವ ಅವರು ಬಂದೂಕು ಹಿಡಿದುಕೊಂಡು ಯೂನಿವರ್ಟಿಗೆ ಒಳಗಿದ್ದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ, ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ಗುಂಪು ಕಟ್ಟಿಕೊಂಡು ಬಂದಿರುವ ಎಲ್ಲರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಯುನಿವರ್ಸಿಟಿಯ ರಿಜಿಸ್ಟ್ರಾರ್ ಡಾ . ನಿವೇದಿತಾ ಮಿಶ್ರಾ ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇತ್ತ ಎಫ್‌ಐಆರ್ ದಾಖಲಾಗುತ್ತಿದ್ದಂತೆ ನಟಿ ಶ್ರೀಲೀಲಾ ತಾಯಿ ಡಾ.ಸ್ವರ್ಣಲತಾ ಪರಾರಿಯಾಗಿದ್ದಾಳೆ. ಸ್ವರ್ಣಲತಾಳಿಗಾಗಿ ಆನೇಕಲ್ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಡಾ.ಸ್ವರ್ಣಲತಾ ಅವರು ಖ್ಯಾತ ಗೈನಕಾಲಜಿಸ್ಟ್ ಕೂಡ ಆಗಿದ್ದಾರೆ. ಎಫ್‌ಆರ್ ದಾಖಲಿಸಿರುವ ಆನೇಕಲ್ ಪೊಲೀಸರು ಸದ್ಯ ಡಾ.ಮಧುಕರ್ ಅಂಗೂರ್‌ನನ್ನು ಬಂಧಿಸಿದ್ದಾರೆ. ಜೊತೆಗೆ ಗೂಂಡಾಗಿರಿ ಮಾಡಿದ ಕೆಲವರನ್ನೂ ಅರೆಸ್ಟ್ ಮಾಡಲಾಗಿದೆ. ಆದರೆ , ಆರೋಪಿ ನಂಬರ್ 2 ಆಗಿರುವ ಡಾ.ಸ್ವರ್ಣಲತಾ ಮಾತ್ರ ಪರಾರಿಯಾಗಿದ್ದು , ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.