ಭೂತಾನ್ ಅಡಿಕೆ ಆಮದಿಗೆ ಅನುಮತಿ: ಬೆಳೆಗಾರರು ಆತಂಕ ಪಡಬೇಕಾಗಿಲ್ಲ- ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ
ಭೂತಾನ್ ಅಡಿಕೆ ಆಮದಿಗೆ ಕೇಂದ್ರ ಅನುಮತಿ: ಬೆಳೆಗಾರರು ಆತಂಕ ಪಡಬೇಕಾಗಿಲ್ಲ- ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ
ಕೇಂದ್ರ ಸರಕಾರವು ದಿನಾಂಕ 28-09-2022ರಂದು DGFT ಮೂಲಕ ಹೊರಡಿಸಿರುವ ಅಧಿಸೂಚನೆ ಸಂಖ್ಯೆ.36/2015-2020ರಲ್ಲಿ ಭೂತನ್ ನಿಂದ 17000 ಟನ್ ಹಸಿ ಅಡಿಕೆ ಆಮದಿಗೆ ಅನುಮತಿ ನೀಡಿದೆ.
ಈ ಆದೇಶದಿಂದ ನಮ್ಮ ದೇಶದ, ಅದರಲ್ಲೂ ವಿಶೇಷವಾಗಿ ಕರ್ನಾಟಕ ಮತ್ತು ಕೇರಳ ರಾಜ್ಯದ ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯ ಇಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಆಮದಿಗೆ ಅನುಮತಿ ನೀಡಿದ ಆದೇಶದಿಂದ ದೇಶೀಯ ಅಡಿಕೆ ದರದ ಸ್ಥಿರತೆಗೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ. ಇದರಿಂದ ದೇಶೀಯ ಗುಣಮಟ್ಟದ ಚಾಲಿಗೆ ಯಾವುದೇ ತೊಂದರೆ ಇಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ಆದರೂ, ಕೇಂದ್ರ ಸರಕಾರದ ಈ ಅಧಿಸೂಚನೆಗೆ ಕ್ಯಾಂಪ್ಕೊ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೇಂದ್ರ ವಾಣಿಜ್ಯ ಸಚಿವರಾದ ಸನ್ಮಾನ್ಯ ಪಿಯೂಷ್ ಗೋಯಲ್ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ಯಾಂಪ್ಕೊ ಪತ್ರ ಬರೆಯುವ ಮೂಲಕ ವಿರೋಧ ವ್ಯಕ್ತಪಡಿಸಿದೆ ಎಂದು ಕೊಡ್ಗಿ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
ಆಮದು ಆಗುವ ಚಾಲಿ ಅಡಿಕೆಗೆ ಕೆಜಿ ಗೆ 362/- ರೂಪಾಯಿ ಕನಿಷ್ಠ ಆಮದು ಬೆಲೆ ನಿಗದಿ ಪಡಿಸುವಂತೆ ಕ್ಯಾಂಪ್ಕೊ ದೆಹಲಿ ನಿಯೋಗದ ಮೂಲಕ ಈಗಾಗಲೇ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ಅಧಿಸೂಚನೆಯ ಅನುಷ್ಠಾನದಿಂದ ದೇಶೀಯ ಮಾರುಕಟ್ಟೆಗೆ ಯಾವುದೇ ತೊಂದರೆ ಇಲ್ಲದಿದ್ದರೂ, ಸನ್ಮಾನ್ಯ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯಂತೆ ರೈತರ ಆದಾಯ ದ್ವಿಗುಣಗೊಳಿಸುವ ಕೇಂದ್ರದ ಸಮಗ್ರ ನೀತಿಗೆ ವ್ಯತಿರಿಕ್ತ ಪರಿಣಾಮ ಬೀರುವ ಕುರಿತು ವಾಣಿಜ್ಯ ಸಚಿವರಿಗೆ ಕ್ಯಾಂಪ್ಕೋ ತನ್ನ ಆತಂಕ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರವು ರೈತರ ಹಿತ ಕಾಪಾಡಲು ಸಕರಾತ್ಮಕ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಕ್ಯಾಂಪ್ಕೊ ಆಶಾಭಾವನೆ ಹೊಂದಿದೆ ಎಂದು ಕೊಡ್ಗಿ ಅವರು ಹೇಳಿದ್ದಾರೆ.