
ನಿತ್ಯಾನಂದ ಸ್ವಾಮೀಜಿ ಆರೋಗ್ಯ ಸ್ಥಿತಿ ಉಲ್ಬಣ: ತುರ್ತು ವೈದ್ಯಕೀಯ ನೆರವಿಗೆ ಶ್ರೀಲಂಕಾ ಸರಕಾರಕ್ಕೆ ಪತ್ರ
Saturday, September 3, 2022
ಬೆಂಗಳೂರು: ಭಾರತದಿಂದ ಎಸ್ಕೇಪ್ ಆಗಿರುವ ಬಿಡದಿ ಧ್ಯಾನಪೀಠದ ಶ್ರೀ ನಿತ್ಯಾನಂದ ಸ್ವಾಮೀಜಿ ತನ್ನ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಆದ್ದರಿಂದ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಿ ಎಂದು ಶ್ರೀಲಂಕಾ ಪ್ರಧಾನಿಗೆ ಪತ್ರ ಬರೆದಿದ್ದಾನೆ. ಶ್ರೀಲಂಕಾ ಸರ್ಕಾರ ವೈದ್ಯಕೀಯ ನೆರವು ನೀಡಿದರೆ, ಅಲ್ಲಿಯೇ ಅಪಾರ ಪ್ರಮಾಣದ ಹಣ ಹೂಡುವುದಾಗಿ ಆಫರ್ ಕೊಟ್ಟಿದ್ದಾನೆ.
'ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶ ಪರಮ ಪೂಜ್ಯ ಶ್ರೀ ನಿತ್ಯಾನಂದ ಪರಮಶಿವಂ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಸದ್ಯ ಕೈಲಾಸದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಖಾಲಿಯಾಗುತ್ತಿದೆ. ನಿತ್ಯಾನಂದ ಅವರಿಗೆ ತುರ್ತು ಚಿಕಿತ್ಸೆ ನೀಡುವ ವೈದ್ಯರ ಅಗತ್ಯವಿದೆ. ಕೈಲಾಸದಲ್ಲಿಯೇ ಇರುವ ನಿತ್ಯಾನಂದರಿಗೆ ಅಗತ್ಯ ವೈದ್ಯಕೀಯ ಲಭ್ಯವಾಗುತ್ತಿಲ್ಲ. ಹಾಗಾಗಿ ನಿತ್ಯಾನಂದ ಅವರಿಗೆ ರಾಜಾಶ್ರಯ ನೀಡುವ ಮೂಲಕ ತಾವು ತುರ್ತು ಚಿಕಿತ್ಸೆಯ ಸೌಲಭ್ಯ ನೀಡಬೇಕು' ಎಂದು ಲಂಕಾ ಪ್ರಧಾನಿಗೆ ಕೈಲಾಸದ ಮುಖ್ಯಸ್ಥರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಆ.7 ರಂದು ದ್ವೀಪ ರಾಷ್ಟ್ರದ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕರ್ನಾಟಕದ ಬಿಡದಿ ಧ್ಯಾನಪೀಠದಲ್ಲಿದ್ದ ನಿತ್ಯಾನಂದ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕಳ ಆರೋಪ ದಟ್ಟವಾಗಿ ಕೇಳಿಬಂದಿತ್ತು. ಬಳಿಕ ಇದ್ದಕ್ಕಿದ್ದಂತೆಯೇ ಕಣ್ಮರೆಯಾಗಿದ್ದ ಈತ, ದ್ವೀಪವೊಂದನ್ನು ಖರೀದಿಸಿ ಅಲ್ಲಿಯೇ ಕೈಲಾಸ ದೇಶ ನಿರ್ಮಿಸಿಕೊಂಡು ಅಲ್ಲಿಂದಲೇ ಚಿತ್ರ - ವಿಚಿತ್ರ ಸಂದೇಶ ಕಳುಹಿಸುತ್ತಿದ್ದ.
ಈ ನಡುವೆ ಕೈಲಾಸ ದೇಶದಲ್ಲೂ ಈತನ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಕೈಲಾಸ ದೇಶದಲ್ಲೂ ಈತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾನೆಂದು ಈತನ ವಿದೇಶಿ ಶಿಷ್ಯೆ ರಾಮನಗರದ ಬಿಡದಿ ಠಾಣೆಗೆ ಪೊಲೀಸ್ ದೂರು ದಾಖಲಿಸಿದ್ದಳು.