ಭುವನೇಶ್ವರ: ಪತ್ನಿಯ ಸಮ್ಮತಿಯಿಂದಲೇ ತೃತೀಯ ಲಿಂಗಿಯನ್ನು ವಿವಾಹವಾದ ಪತಿ
Wednesday, September 14, 2022
ಭುವನೇಶ್ವರ: ವಿವಾಹಿತನೋರ್ವನು ತನ್ನ ಪತ್ನಿಯ ಒಪ್ಪಿಗೆಯಿಂದಲೇ ತೃತೀಯಲಿಂಗಿಯನ್ನು ಮದುವೆಯಾಗಿರುವ ವಿಚಿತ್ರ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿರುವ ನಾರ್ಲಾ ದೇವಸ್ಥಾನದಲ್ಲಿ ನಡೆದಿದೆ.
32ವರ್ಷದ ವಯಸ್ಸಿನ ಈತನ ಪತ್ನಿ ವಿವಾಹವಾಗಲು ಮಾತ್ರ ಒಪ್ಪಿಗೆ ನೀಡಿರುವುದಲ್ಲದೆ, ಜೊತೆಯಾಗಿ ಒಂದೇ ಮನೆಯಲ್ಲಿ ವಾಸಿಸಲು ಸಹ ಅನುಮತಿ ನೀಡಿದ್ದಾಳೆ. ಎರಡು ವರ್ಷದ ಪುತ್ರನ ತಂದೆಯಾಗಿರುವ ಈ ಯುವಕನು ಕಳೆದ ವರ್ಷ ರಾಯಗಡ ಜಿಲ್ಲೆಯ ಅಂಬಾಡೊಲಾ ಪ್ರದೇಶದಲ್ಲಿ ತೃತೀಯಲಿಂಗಿಯನ್ನು ನೋಡಿದ್ದ. ಈ ವೇಳೆ ಈ ತೃತೀಯಲಿಂಗಿ ಭಿಕ್ಷೆ ಬೇಡುತ್ತಿದ್ದಳು. ಈತನಿಗೆ ಮೊದಲ ನೋಟದಲ್ಲಿಯೇ ಆಕೆಯ ಮೇಲೆ ಪ್ರೀತಿ ಮೂಡಿದೆ. ಆಕೆಯ ಮೊಬೈಲ್ ನಂಬರ್ ಪಡೆದು ನಿರಂತರವಾಗಿ ಸಂಪರ್ಕದಲ್ಲಿದ್ದ.
ತನ್ನ ಪತಿಯು, ತೃತೀಯಲಿಂಗಿಯೊಂದಿಗೆ ನಿರಂತರವಾಗಿ ಫೋನ್ ಮೂಲಕ ಮಾತನಾಡುತ್ತಿರುವುದು ಪತ್ನಿಗೆ ಒಂದು ತಿಂಗಳ ತಿಳಿದು ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ತೃತೀಯಲಿಂಗಿಯೊಂದಿಗೆ ಸಂಬಂಧ ಇರುವುದನ್ನು ಆತ ಒಪ್ಪಿದ್ದಾನೆ. ಅಲ್ಲದೆ ತಮ್ಮಿಬ್ಬರ ನಡುವಿನ ಸಂಬಂಧ ಬಹಳ ಗಾಢವಾಗಿದೆ ಎಂದು ಹೇಳುತ್ತಾನೆ. ಪತಿಯ ಮಾತಿಗೆ ಕರಗುವ ಪತ್ನಿ, ತೃತೀಯ ಲಿಂಗಿಯನ್ನು ಮದುವೆ ಮಾಡಿಕೊಳ್ಳಲು ಹಾಗೂ ತಮ್ಮೊಂದಿಗೆ ಇರಿಸಿಕೊಳ್ಳಲು ಒಪ್ಪಿಕೊಳ್ಳುತ್ತಾಳೆ. ಪತ್ನಿಯ ಒಪ್ಪಿಗೆ ದೊರಕಿದ ತಕ್ಷಣ ತೃತೀಯಲಿಂಗಿಯನ್ನು ಕರೆತಂದು ತೃತೀಯಲಿಂಗಿ ಸಮುದಾಯವು ಸೇರಿದಂತೆ ಸೀಮಿತ ಅತಿಥಿಗಳ ಸಮ್ಮುಖದಲ್ಲಿ ನಾರ್ಲಾ ದೇವಸ್ಥಾನದಲ್ಲಿ ಮದುವೆ ಆಗಿದ್ದಾನೆ.
ಇದೀಗ ಒಡಿಶಾದ ಹೈಕೋರ್ಟ್‌ನ ಹಿರಿಯ ವಕೀಲ ಶ್ರೀನಿವಾಸ್ ಮೊಹಂತಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದು ಕುಟುಂಬದಲ್ಲಿ ಮಹಿಳೆಯಾಗಲಿ ಅಥವಾ ತೃತೀಯಲಿಂಗಿಗಳಾಗಿರಲಿ ಎರಡನೇ ವಿವಾಹವನ್ನು ಭಾರತೀಯ ಕಾನೂನಿನ ಪ್ರಕಾರ ಅನುಮತಿಸಲಾಗುವುದಿಲ್ಲ . ಎರಡನೇ ಮದುವೆ ನಡೆದರೆ ಅದು ಅನೂರ್ಜಿತವಾಗಿದೆ ಮತ್ತು ಭಾರತೀಯ ಕಾನೂನಿನ ಪ್ರಕಾರ ದಂಡದ ಕ್ರಮಕ್ಕೆ ಅರ್ಹವಾಗಿದೆ ಎಂದು ಹೇಳಿದ್ದಾರೆ.
ನಾರ್ಲಾ ಪೊಲೀಸ್ ಠಾಣೆಯ ಪ್ರಭಾರಿ ಇನ್ ಸ್ಪೆಕ್ಟರ್ ಪ್ರತಿಕ್ರಿಯೆ ನೀಡಿ, ನೊಂದ ವ್ಯಕ್ತಿ ಯಾವುದೇ ಘಟನೆ ( ತೃತೀಯಲಿಂಗಿ ಮದುವೆ ) ಬಗ್ಗೆ ದೂರು ನೀಡಿದರೆ, ನಾವು ಕಾನೂನಿನ ಪ್ರಕಾರ ಮಾತ್ರ ಮುಂದುವರಿಯುತ್ತೇವೆ ಎಂದಿದ್ದಾರೆ.