
ಬೆಂಗಳೂರು: ಆ ನಿರ್ದೇಶಕ ನೀಡಿರುವ ಕಿರುಕುಳ ಅಷ್ಟಿಷ್ಟಲ್ಲ: ನಟಿ ಆಶಿತಾ ಬಿಚ್ಚಿಟ್ಟ ಸತ್ಯವೇನು?
Saturday, September 17, 2022
ಬೆಂಗಳೂರು: ಸಿನಿಮಾ ರಂಗದಲ್ಲಿ ನಟಿಯರು ಲೈಂಗಿಕ ಕಿರುಕುಳದ ಕುರಿತಂತೆ ಮೀ ಟೂ ಅಭಿಯಾನ 2018ರಲ್ಲಿ ಸಾಕಷ್ಟು ಸದ್ದು ಮಾಡಿತ್ತು. ನಟಿ ಶ್ರುತಿ ಹರಿಹರನ್ ತಮಗಾಗಿರುವ ಕಹಿ ಅನುಭವಗಳನ್ನು ಬಿಚ್ಚಿಟ್ಟ ಬಳಿಕ ಹಲವು ನಟಿಯರು ಸೇರಿದಂತೆ ವಿವಿಧ ಕ್ಷೇತ್ರಗಳ ಮಹಿಳೆಯರು ಮೀ ಟೂ ಅಭಿಯಾನವನ್ನೇ ಶುರು ಮಾಡಿದ್ದರು. ಇದಾದ ಬಳಿಕ ಈ ಅಭಿಯಾನ ಸ್ವಲ್ಪ ತಣ್ಣಗಾಗುತ್ತಾ ಬಂದಿತ್ತು.
ಇದೀಗ ಮತ್ತೆ ಸ್ಯಾಂಡಲ್‌ವುಡ್ ನಟಿ ಆಶಿತಾ ಚಿತ್ರರಂಗದಲ್ಲಿ ತಮಗಾಗಿರುವ ಕಹಿ ಅನುಭವಗಳನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. 'ಬಾ ಬಾರೋ ರಸಿಕ' ಖ್ಯಾತಿಯ ಆಶಿತಾ, 'ರೋಡ್ ರೊಮಿಯೋ' ಸಿನಿಮಾದ ಬಳಿಕ ಸಿನಿಮಾ ರಂಗದಿಂದ ದೂರವೇ ಉಳಿದಿದ್ದರು. ಇದಕ್ಕೆ ತಾವು ಚಿತ್ರರಂಗದಲ್ಲಿ ಅನುಭವಿಸಿರುವ ಕಹಿ ಘಟನೆಗಳೇ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ಆಶಿತಾ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ.
ಆಶಿತಾ, ನಿರ್ದೇಶಕರೊಬ್ಬರಿಂದ ತಮಗಾಗಿರುವ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ಆ ನಿರ್ದೇಶಕರ ಹೆಸರನ್ನು ಹೇಳದೆ ಆತನಿಂದ ತಾನು ಸಾಕಷ್ಟು ಕಿರುಕುಳ ಅನುಭವಿಸಿದೆ ಎಂದು ಹೇಳಿದ್ದಾರೆ. 'ಆತ ತನ್ನೊಂದಿಗೆ ಸಲುಗೆಯಿಂದ ಇರಲು ಪದೇ ಪದೇ ಒತ್ತಾಯ ಮಾಡುತ್ತಿದ್ದ. ಅದಕ್ಕೆ ಒಪ್ಪದಿದ್ದಾಗ ಸಾಕಷ್ಟು ಅವಮಾನ ಮಾಡಿದ್ದಾರೆ. ಟೇಕ್ ಚೆನ್ನಾಗಿ ಬಂದಿದ್ದರೂ ಮತ್ತೆ ರಿಟೇಕ್ ಮಾಡಿಸುತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ ' ಎಂದು ಆಶಿತಾ ಹೇಳಿದ್ದಾರೆ.
'ಯಾವಾಗಲೂ ಸರ್, ಸರ್, ಸರ್ ಅನ್ನುತ್ತಿರಬೇಕು. ಮೆಸೇಜ್ ಮಾಡುತ್ತಿರಬೇಕು. ಹಾಯ್ ಎಂದು ಹೇಳ್ತಾ ಇರಬೇಕು. ಇದನ್ನೆಲ್ಲ ನಾನು ಮಾಡ್ತಿರ್ಲಿಲ್ಲ. ಆದ್ದರಿಂದ ಆತ ತನಗೆ ಸಾಕಷ್ಟು ಕಷ್ಟ ಕೊಟ್ಟರು. ಸಿನಿ ಪಯಣದಲ್ಲಿ ಪೀಕ್ ನಲ್ಲಿ ಇದ್ದಾಗ ಇದು ಆಗಿದ್ದು, ದೊಡ್ಡ ದೊಡ್ಡ ಕಲಾವಿದರ ಜೊತೆ ಕೆಲಸ ಮಾಡಿದಾಗ ನನಗೆ ಏನು ಆಗಿರ್ಲಿಲ್ಲ. ಹೊಸಬರು ಜೊತೆ ಕೆಲಸ ಮಾಡುವಾಗ ಇಂಥ ಕೆಟ್ಟ ಅನುಭವವಾಗಿದೆ' ಎಂದು ಹೇಳಿದ್ದಾರೆ.
ನನ್ನಂಥವಳಿಗೆ ಹೀಗಾಗಿರುವಾಗ, ಇನ್ನು ಹೊಸ ಹುಡುಗಿಯರು ಎಷ್ಟು ಕಷ್ಟ ಪಟ್ಟಿದ್ದಾರೋ ಗೊತ್ತಿಲ್ಲ. ಈಗಲೂ ನನಗೆ ನಟಿಸುವ ಆಸಕ್ತಿ ಇದೆ. ಉತ್ತಮ ಪಾತ್ರ ಸಿಕ್ಕರೆ ಸಿನಿಮಾಗೆ ವಾಪಸ್ ಬರುವೆ ಎಂದಿದ್ದಾರೆ ಆಶಿತಾ
ಅಂದಹಾಗೆ ಆಶಿತಾ, ಮುಂಬೈನಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು. ಎಂಬಿಎ ಪದವಿ ಪಡೆದಿರುವ ಇವರು ತಮ್ಮ ಮೊದಲ ಬ್ಯೂಟಿ ಕಂಟೆಸ್ಟ್ ಗೆದ್ದದ್ದು 16 ನೇ ವಯಸ್ಸಿನಲ್ಲಿ . ನಂತರ ಮಿಸ್ ಬ್ಲಾಸಮ್ -1998, ಮಿಸ್ ಎಕೋಟಿಕಾ- 1999 ಮಿಸ್ ಮಿಲೇನಿಯಂ - 2000 ಸ್ಪರ್ಧೆಗಳಲ್ಲಿ ವಿಜೇತರಾದರು. `ಬಾ ಬಾ ಬಾರೋ ರಸಿಕ ' ಸೇರಿದಂತೆ ತವರಿನ ಸಿರಿ , ಆಕಾಶ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.