
ಮಂಗಳೂರು: ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದ ಜನತೆಯ ಆಶೋತ್ತರಗಳಿಗೆ ಈಡೇರಿಕೆ: ಪ್ರಧಾನಿ ನರೇಂದ್ರ ಮೋದಿ
Friday, September 2, 2022
ಮಂಗಳೂರು: ಕೇಂದ್ರ ಹಾಗೂ ರಾಜ್ಯದ ಡಬಲ್ ಇಂಜಿನ್ ಸರ್ಕಾರದ ಮೂಲಕ ರಾಜ್ಯದ ಜನತೆಯ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ 3,800 ಕೋಟಿ ರೂ. ಮೊತ್ತದ 8ಯೋಜನೆಗಳಿಗೆ ಲೋಕಾರ್ಪಣೆ ಹಾಗೂ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದ ಅವರು, ಕಳೆದ 8 ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಮಾಡಲಾಗಿರುವ ಪ್ರಗತಿಯಲ್ಲಿ ಬಹುದೊಡ್ಡ ಪಾಲು ಕರ್ನಾಟಕಕ್ಕೆ ಲಭಿಸಿದೆ. ಸಾಗರಮಾಲಾ ಯೋಜನೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲ್ವೇ ಹಳಿಗಳ ವಿದ್ಯುದ್ದೀಕರಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಾಲ್ಕು ಪಟ್ಟು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದಲ್ಲಿ 30ಲಕ್ಷ ಮನೆಗಳಿಗೆ ನೇರವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಪ್ರಧಾನಮಂತ್ರಿ ಆಯುಷ್ಮಾನ್ ಯೋಜನೆಯಡಿ 30ಲಕ್ಷ ಫಲಾನುಭವಿಗಳಿಗೆ 4ಸಾವಿರ ಕೋಟಿ ರೂ.ಮೊತ್ತದ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡಲು ಸಾಧ್ಯವಾಗಿದೆ. ದೇಶದ ಪ್ರಥಮ ಸ್ವದೇಶಿ ಏರ್‌ಕ್ರಾಫ್ಟ್ ವಾಹನ ನೌಕೆಯನ್ನು ಇಂದು ಕೊಚ್ಚಿಯಲ್ಲಿ ಲೋಕಾರ್ಪಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ದೇಶದ ಸೇನಾ ಸುರಕ್ಷತೆಗೆ ಹಾಗೂ ಆರ್ಥಿಕ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ನವ ಮಂಗಳೂರು ಬಂದರಿನಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೆ 3,800 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಇದರಿಂದ ದೇಶದ ಆರ್ಥಿಕತೆಗೆ ಮಾತ್ರವಲ್ಲದೆ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿ ಸಾಧ್ಯವಾಗಲಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಸ್ಥಳೀಯ ಕೃಷಿಕರಿಗೆ ಹಾಗೂ ಮೀನುಗಾರರಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಸುಲಭವಾಗಲಿದೆ. ಕಡಿಮೆ ವೆಚ್ಚದಲ್ಲಿ ಉತ್ಪನ್ನಗಳ ರಫ್ತು ಸಾಧ್ಯವಾಗಲಿದ್ದು, ನವ ಮಂಗಳೂರು ಬಂದರಿನ ಸಾಮರ್ಥ್ಯ ದ್ವಿಗುಣಳ್ಳಲಿದೆ ಎಂದು ಹೇಳಿದರು.