ರಿಸೆಪ್ಷನಿಸ್ಟ್ ಹತ್ಯೆಯ ಹಿಂದೆ ರೆಸಾರ್ಟ್ ಮಾಲಕ, ಬಿಜೆಪಿ ನಾಯಕನ ಪುತ್ರನ ಕೈವಾಡ: ಮರಣೋತ್ತರ ಪರೀಕ್ಷೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
Sunday, September 25, 2022
ಉತ್ತರಾಖಂಡ: ಬಿಜೆಪಿಯ ಮಾಜಿ ಸಚಿವ ವಿನೋದ್ ಆರ್ಯನ ಪುತ್ರನ ರೆಸಾರ್ಟ್ ನಿಂದ ನಾಪತ್ತೆಯಾಗಿದ್ದ ಯುವತಿಯ ಹತ್ಯೆಯಾದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಕೊಲೆಗೆ ಆಕೆ ರೆಸಾರ್ಟ್ ಗೆ ಬರುವ ಗ್ರಾಹಕರಿಗೆ 'ಸ್ಪೆಷಲ್ ಸರ್ವಿಸ್' ನೀಡಲು ಒಪ್ಪದಿರುವುದೇ ಕಾರಣ ಎಂಬ ಸಂಗತಿಯೂ ಬಯಲಾಗಿದೆ.
ಇದರ ಬೆನ್ನಲ್ಲೇ ಆಕೆಯ ಮರಣೋತ್ತರ ಪರೀಕ್ಷೆಯ ವರದಿಯೂ ಹೊರಬಿದ್ದಿದೆ. ಅದರಲ್ಲಿ ಸಾವಿನ ಸ್ಫೋಟಕ ಸತ್ಯ ರಹಸ್ಯ ಬಹಿರಂಗವಾಗಿದೆ. 19 ವರ್ಷದ ಅಂಕಿತಾ ಭಂಡಾರಿಯು ನೀರಿನಲ್ಲಿ ಮುಳುಗಿಸಿ ಆಗುವ ಉಸಿರುಗಟ್ಟುವಿಕೆಯಿಂದ ಮೃತಪಟ್ಟಿದ್ದಾಳೆಂದು ಮರಣೋತ್ತರ ವರದಿಯಲ್ಲಿ ಉಲ್ಲೇಖವಾಗಿದೆ. ಅಲ್ಲದೆ, ಸಾವಿಗೂ ಮುನ್ನ ಆಕೆಯ ದೇಹದಲ್ಲಿ ಗಾಯಳಾಗಿದ್ದು, ಅದು ಆಯುಧದಿಂದ ಬಲವಾಗಿ ಹೊಡೆದಿರುವ ಗಾಯದ ಗುರುತುಗಳಾಗಿವೆ ಎಂಬ ಅಂಶ ಮರಣೋತ್ತರ ವರದಿಯಲ್ಲಿದೆ. ಅಂಕಿತಾ ಮರಣೋತ್ತರ ಪರೀಕ್ಷೆಯನ್ನು ರಿಷಿಕೇಶದಲ್ಲಿರುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶನಿವಾರ ಮಾಡಲಾಯಿತು. ಬಳಿಕ ಅಂದೇ ಆಕೆಯ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದ್ದು , ಅಂತ್ಯಕ್ರಿಯೆ ನೆರವೇರಿದೆ.
ಉತ್ತರಾಖಂಡದಲ್ಲಿ ಬಿಜೆಪಿಯ ಹಿರಿಯ ನಾಯಕ , ಮಾಜಿ ಸಚಿವ ವಿನೋದ್ ಆರ್ಯ ಎಂಬವರ ಪುತ್ರ ಪುಲ್ಕಿತ್ ಆರ್ಯ ಮಾಲೀಕತ್ವದ ರೆಸಾರ್ಟ್ ಹರಿದ್ವಾರದ ರಿಷಿಕೇಶ್‌ನಲ್ಲಿದ್ದು , ಅಲ್ಲಿ ಅಂಕಿತಾ ಭಂಡಾರಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಆಕೆ ವಾರದ ಹಿಂದೆ ನಾಪತ್ತೆಯಾಗಿದ್ದಳು. ಆ ಬಳಿಕ ಆಕೆಯ ಹತ್ಯೆಯಾಗಿದೆ. ಈ ಕೊಲೆಗೂ ರೆಸಾರ್ಟ್ ಮಾಲಕ ಪುಲ್ಕಿತ್ ಆರ್ಯನಿಗೂ ಸಂಬಂಧವಿದೆ ಎಂಬು ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ಹಿನ್ನೆಲೆಯಲ್ಲಿ ನಿನ್ನೆ ಪೊಲೀಸರು ರೆಸಾರ್ಟ್ ಮಾಲಕ ಪುಲ್ಕಿತ್ ಆರ್ಯ, ಮ್ಯಾನೇಜರ್ ಸೌರಭ್ ಭಾಸ್ಕರ್, ಅಸಿಸ್ಟೆಂಟ್ ಮ್ಯಾನೇಜರ್ ಅಂಕಿತ್ ಗುಪ್ತಾರನ್ನು ಬಂಧಿಸಿದ್ದರು. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆಕೆಯನ್ನು ಕೊಲೆ ಮಾಡಿ ನಾಲೆಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದರು ತಕ್ಷಣ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ನಿನ್ನೆ ಛೀಲಾ ನಾಲೆಯಲ್ಲಿ ಅಂಕಿತಾ ಭಂಡಾರಿಯ ಮೃತದೇಹ ಪತ್ತೆಯಾಗಿದೆ.
ಆಕೆಗೆ ರೆಸಾರ್ಟ್‌ಗೆ ಬರುವ ಗ್ರಾಹಕರಿಗೆ ಸ್ಪೆಷಲ್ ಸರ್ವಿಸ್ ಕೊಡಬೇಕೆಂದು ಪುಲ್ಕಿತ್ ಆರ್ಯ ಒತ್ತಡ ಹಾಕುತ್ತಿದ್ದ. ಇದು ಅಂಕಿತಾ ತನ್ನ ಸ್ನೇಹಿತೆಯರೊಂದಿಗೆ ನಡೆಸಿದ್ದ ಚಾಟ್‌ನಿಂದಾಗಿ ತಿಳಿದುಬಂದಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಮತ್ತೊಂಡೆ ಆ ಸ್ಪೆಷಲ್ ಸರ್ವಿಸ್ ಏನು ಎಂಬುದು ಖಚಿತವಾಗಿಲ್ಲ. ಇದಕ್ಕೂ ಮೊದಲು ಅಂಕಿತಾ ಸ್ನೇಹಿತನೊಬ್ಬ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ಮಾಹಿತಿ ಪ್ರಕಾರ, ರೆಸಾರ್ಟ್ ಗ್ರಾಹಕರೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಆಕೆ ಮೇಲೆ ಮಾಲೀಕರ ಒತ್ತಡವಿತ್ತು ಎಂಬುದು ತಿಳಿದುಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.