![ಶಿವಮೊಗ್ಗ: ತಡವಾಗಿ ಮನೆಗೆ ಬರುತ್ತಿದ್ದ ಪತಿಯನ್ನು ಪ್ರಶ್ನಿಸಿದ ಪತ್ನಿ: ಆ ಬಳಿಕ ನಡೆದದ್ದೇ ಭಾರೀ ದುರಂತ ಶಿವಮೊಗ್ಗ: ತಡವಾಗಿ ಮನೆಗೆ ಬರುತ್ತಿದ್ದ ಪತಿಯನ್ನು ಪ್ರಶ್ನಿಸಿದ ಪತ್ನಿ: ಆ ಬಳಿಕ ನಡೆದದ್ದೇ ಭಾರೀ ದುರಂತ](https://blogger.googleusercontent.com/img/b/R29vZ2xl/AVvXsEgx-C3_BgGPg-bhiuUwaTmhWxoflXOyM5DoU6Cx2uKw43dc0D_fKGrTTk2sCnUH1zYu0VyqmvrSb2Le8Y5Vki6DruOpc7xDokI6DXG3v_29eb-FotlpAPMDT0Un9ItfuRxUqgqWtiVGxaJM/s1600/1662565015291866-0.png)
ಶಿವಮೊಗ್ಗ: ತಡವಾಗಿ ಮನೆಗೆ ಬರುತ್ತಿದ್ದ ಪತಿಯನ್ನು ಪ್ರಶ್ನಿಸಿದ ಪತ್ನಿ: ಆ ಬಳಿಕ ನಡೆದದ್ದೇ ಭಾರೀ ದುರಂತ
Wednesday, September 7, 2022
ಶಿವಮೊಗ್ಗ: ದಿನಂಪ್ರತಿ ರಾತ್ರಿ ವೇಳೆ ತಡವಾಗಿ ಮನೆ ಸೇರುತ್ತಿದ್ದ ಪತಿಯನ್ನು ಪ್ರಶ್ನಿಸಿದ ಪತ್ನಿಯನ್ನು ಚೂರಿಯಿಂದ ಇರಿದು ಪತಿಯೇ ಹತ್ಯೆ ಮಾಡಿ, ತಾನೂ ಕೈಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ ನಗರದ ಬೈಪಾಸ್ ರಸ್ತೆಯ ಪ್ರಿಯಾಂಕಾ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಆದರೆ ತಾಯಿಯನ್ನು ಕಳೆದುಕೊಂಡ ಪುಟ್ಟ ಮಕ್ಕಳಿಬ್ಬರ ಸಂಕಟವನ್ನು ಕೇಳುವವರಿಲ್ಲದಾಗಿದೆ.
ಶಿವಮೊಗ್ಗದ ಮೆಸ್ಕಾಂ ನೌಕರ ದಿನೇಶ್ 12 ವರ್ಷಗಳ ಹಿಂದೆ ಶಿವಮೊಗ್ಗ ತಾಲೂಕಿನ ಮತ್ತಿಘಟ್ಟ ನಿವಾಸಿ ಮಂಜುಳಾರನ್ನು ವಿವಾಹವಾಗಿದ್ದರು. ದಂಪತಿಗೆ 10 ವರ್ಷ ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಿನೇಶ್ ಪ್ರತಿದಿನ ಮನೆಗೆ ತಡವಾಗಿ ಬರುತ್ತಿದ್ದ. ಇದೇ ಕಾರಣಕ್ಕೆ ದಂಪತಿ ನಡುವೆ ಜಗಳವಾಗುತ್ತಿತ್ತು. ಮಂಗಳವಾರ ರಾತ್ರಿಯೂ ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದೆ.
ಮಾತಿಗೆ ಮಾತು ಬೆಳೆದು ದಿನೇಶ್ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿ ಮಂಜುಳಾ ಕತ್ತು ಕೊಯ್ದಿದ್ದಾನೆ. ಈ ವೇಳೆ ಮಂಜುಳಾ ಅರಚಾಡಿದ್ದು, ಅಕ್ಕಪಕ್ಕದವರು ಪ್ರಕರಣದ ಗಂಭೀರತೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಢಾಯಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಂಜುಳಾ ರಕ್ತದ ಮಡುವಿನಲ್ಲಿ ಮೃತದೇಹವಾಗಿ ಬಿದ್ದಿದ್ದಾರೆ.
ಆದರೆ ಆ ಬಳಿಕ ಹೆದರಿ ದಿನೇಶ್ ತಾನೂ ಬ್ಲೇಡ್‌ನಿಂದ ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಾಯಗೊಂಡಿರುವ ದಿನೇಶ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.