
ಮಂಗಳೂರು: ಬೆಳ್ಳಂಬೆಳಗ್ಗೆಎಸ್ ಡಿಪಿಐ, ಪಿಎಫ್ಐ ಕಚೇರಿಗೆ ಎನ್ಐಎ ದಾಳಿ; ಮಹತ್ವದ ದಾಖಲೆಗಳು ವಶಕ್ಕೆ
Thursday, September 22, 2022
ಮಂಗಳೂರು: ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ, ಎಸ್ ಡಿ ಪಿ ಐ ಕಚೇರಿ ಮೇಲೆ ಎನ್ಐಎ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ.
ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಎನ್ಐಎ ದಾಳಿ ನಡೆಸಿದ್ದು, ದಾಳಿಯ ವೇಳೆ ನೆಲ್ಲಿಕಾಯಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ದಾಳಿಯ ವೇಳೆ 200 ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು 50 ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿ ಅಂತ್ಯಗೊಂಡ ಬಳಿಕ ಹಲವು ಮಹತ್ವದ ದಾಖಲೆಗಳು, ಕಡತಗಳು, ಲ್ಯಾಪ್‌ಟಾಪ್ ಗಳೊಂದಿಗೆ ಎನ್ಐಎ ಅಧಿಕಾರಿಗಳು ಮರಳಿದ್ದಾರೆ.
ದಾಳಿಯ ಬಗ್ಗೆ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಪ್ರತಿಕ್ರಿಯಿಸಿ, ಎನ್ಐಎ ತಂಡ ಪಿಎಫ್ಐ ಕಚೇರಿಗೆ ದಾಳಿ ನಡೆಸಿದೆ. ಆದರೆ ಅವರಿಗೆ ತಿಳಿಯದೆ ಎಸ್ ಡಿಪಿಐ ಕಚೇರಿಗೆ ದಾಳಿ ನಡೆಸಿದ್ದಾರೆ. ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್ ಡಿಪಿಐ ಕಚೇರಿಯಿರುವ ಕಟ್ಟಡದ ಮೇಲ್ಗಡೆ ಪಿಎಫ್ಐ ಕಚೇರಿಯಿದೆ. ಆ ಬಳಿಕ ಎರಡೂ ಕಚೇರಿಗಳನ್ನು ಪರಿಶೀಲನೆ ಮಾಡಿದ್ದಾರೆ.
ನಮ್ಮ ಲ್ಯಾಪ್‌ಟಾಪ್, ಕೆಲವೊಂದು ದಾಖಲೆಗಳನ್ನು ದಾಳಿ ವೇಳೆ ಎನ್ಐಎ ವಶಕ್ಕೆ ತೆಗೆದುಕೊಂಡಿದೆ. ನಮ್ಮನ್ನು ಯಾವುದೇ ರೀತಿ ವಿಚಾರಣೆ ಮಾಡಿಲ್ಲ. ನಮ್ಮ ಕಪಾಟುಗಳನ್ನು ಸಂಪೂರ್ಣ ಪರಿಶೀಲನೆ ಮಾಡಿದ್ದಾರೆ. ಯಾವ ಕಾರಣಕ್ಕೆ ಈ ದಾಳಿ ನಡೆಸಿದೆ ಎಂದು ಎನ್ಐಎ ತಂಡ ತಿಳಿಸಿಲ್ಲ. ಆದರೆ ನಾವು ರಾಜಕೀಯವಾಗಿ ಬೆಳವಣಿಗೆ ಆಗುತ್ತಿದ್ದೇವೆ ಎಂಬ ಕುತಂತ್ರದಿಂದ ಬಿಜೆಪಿ ಈ ದಾಳಿಯನ್ನು ನಡೆಸಿದೆ ಎಂದರು.