![NIA ತನಿಖೆ ಬಳಿಕ ರಿಯಾಜ್ ಫರಂಗಿಪೇಟೆ ಹೇಳಿದ್ದೇನು ? NIA ತನಿಖೆ ಬಳಿಕ ರಿಯಾಜ್ ಫರಂಗಿಪೇಟೆ ಹೇಳಿದ್ದೇನು ?](https://blogger.googleusercontent.com/img/b/R29vZ2xl/AVvXsEgGaWIUYpsulFwiY_8Fq_S_ZMyCJ3In2t0r-QWTS_NlHdtec4UU_MQLuyzm59Ho7FOz2QsNZbx7xeaoi7mm-KTEwXShJ1OCHuq7FaLOHhXRgfWqN3ZFkaFmajZdt6cbc8kNwU5mEWcLlnFD/s1600/1662631874135062-0.png)
NIA ತನಿಖೆ ಬಳಿಕ ರಿಯಾಜ್ ಫರಂಗಿಪೇಟೆ ಹೇಳಿದ್ದೇನು ?
Thursday, September 8, 2022
ಮಂಗಳೂರು: 2022ರ ಜುಲೈನಲ್ಲಿ ಬಿಹಾರದಲ್ಲಿ ನಡೆದಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎನ್ಐಎ ರಿಯಾಝ್ ಫರಂಗಿಪೇಟೆ ಮನೆಗೆ ದಾಳಿ ನಡೆಸಿದೆ. ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ರಿಯಾಝ್ ಫರಂಗಿಪೇಟೆ 'ಕೇಂದ್ರದ ಬಿಜೆಪಿ ಸರಕಾರದಿಂದ ತನಿಖಾ ಸಂಸ್ಥೆಗಳು ರಾಜಕೀಯ ಪ್ರೇರಿತವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆಣತಿಯಂತೆ ತನಿಖಾ ಸಂಸ್ಥೆಗಳು ಕೆಲಸ ಮಾಡುತ್ತಿರುವುದನ್ನು ನಾವು ವಿವಿಧ ಪ್ರಕರಣಗಳಲ್ಲಿ ಕಾಣುತ್ತಿದ್ದೇವೆ. ಆದರೆ ಈ ಪ್ರಕರಣ ಆ ರೀತಿ ಆಗದಿರಲಿ' ಎಂದು ಹೇಳಿದರು.
ನನ್ನ ಮನೆಗೆ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಎನ್ಐಎ ತಂಡ ಬಿಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಹಲವಾರು ಪ್ರಶ್ನೆಗಳು ಕೇಳಿದೆ. ಕೆಲವೊಂದು ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಆದರೆ ಈ ಎನ್ಐಎ ತನಿಖೆ ಪಾರದರ್ಶಕವಾಗಿರಲಿ ಎಂದು ಕೇಳಿಕೊಳ್ಳುತ್ತಿದ್ದೇನೆಂದು ರಿಯಾಝ್ ಫರಂಗಿಪೇಟೆ ಹೇಳಿದರು.
ಎಸ್ ಡಿಪಿಐ ಪಕ್ಷದ ಬಿಹಾರ ರಾಜ್ಯದ ಉಸ್ತುವಾರಿ ನನಗೆ ನೀಡಲಾಗಿದೆ. ನಾನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯೂ ಹೌದು. ಆದ್ದರಿಂದ ತಾನು ಯಾವಾಗಲೂ ಬಿಹಾರಕ್ಕೆ ಹೋಗುತ್ತಿರುತ್ತೇನೆ. ಹಾಗಾಗಿ ತಾನು ಕೆಲವೊಂದು ಮೀಟಿಂಗ್ ಗಳಲ್ಲಿ ಭಾಗವಹಿಸುತ್ತಿರುತ್ತೇನೆ. ಈ ಹಿನ್ನೆಲೆಯಲ್ಲಿ ತನ್ನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ಮೋದಿ ಕಾರ್ಯಕ್ರಮವೊಂದರ ವೇಳೆ ಗೊಂದಲ ಸೃಷ್ಟಿಸುವ ಊಹಾಪೋಹಗಳು ಕೇಳಿಬಂದಿತ್ತು ಎಂದರು.
ಆ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ. ಈ ವೇಳೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನೂ ಬಂಧಿಸಿದ್ದರು. ಅದರ ತನಿಖೆಗೆ ಸಂಬಂಧಿಸಿದಂತೆ ಎನ್ಐಎ ತಂಡ ಪರಿಶೀಲನೆ ನಡೆಸಿದೆ. ಎನ್ಐಎ ತಂಡ ನನ್ನ ಹಾಗೂ ನನ್ನ ಪತ್ನಿಯ ಮೊಬೈಲ್ ಫೋನ್ ಗಳು ಮತ್ತು ಕೆಲವೊಂದು ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ರಿಯಾಝ್ ಫರಂಗಿಪೇಟೆ ಹೇಳಿದರು.