![ಶಾಲೆಯ ಶೌಚಗೃಹದಲ್ಲಿ ಮಗುವಿಗೆ ಜನ್ಮ ನೀಡಿ ಪೊದೆಗೆಸೆದ ಪಿಯುಸಿ ವಿದ್ಯಾರ್ಥಿನಿ: ಎಸ್ಎಸ್ಎಲ್ ಸಿ ವಿದ್ಯಾರ್ಥಿ ವಿರುದ್ಧ ದೂರು ದಾಖಲು ಶಾಲೆಯ ಶೌಚಗೃಹದಲ್ಲಿ ಮಗುವಿಗೆ ಜನ್ಮ ನೀಡಿ ಪೊದೆಗೆಸೆದ ಪಿಯುಸಿ ವಿದ್ಯಾರ್ಥಿನಿ: ಎಸ್ಎಸ್ಎಲ್ ಸಿ ವಿದ್ಯಾರ್ಥಿ ವಿರುದ್ಧ ದೂರು ದಾಖಲು](https://blogger.googleusercontent.com/img/b/R29vZ2xl/AVvXsEgPlv8tlHyTZOojJJRZ_ZroM_WiM8lDEO58_SDIWVX33UkJo88KJXlclNTI_GXihiwEJU1C99APY95mMXTIcdwsDksmt7IP8T9ovhTwMcYtD63xg393hW75wVnP18ZCLUgNdXUOWugycKb-/s1600/1662436175136202-0.png)
ಶಾಲೆಯ ಶೌಚಗೃಹದಲ್ಲಿ ಮಗುವಿಗೆ ಜನ್ಮ ನೀಡಿ ಪೊದೆಗೆಸೆದ ಪಿಯುಸಿ ವಿದ್ಯಾರ್ಥಿನಿ: ಎಸ್ಎಸ್ಎಲ್ ಸಿ ವಿದ್ಯಾರ್ಥಿ ವಿರುದ್ಧ ದೂರು ದಾಖಲು
Tuesday, September 6, 2022
ಚೆನ್ನೈ: ನವಜಾತ ಶಿಶುವಿನ ಮೃತದೇಹ ಶಾಲೆಯೊಂದರ
ಬಳಿಯ ಪೊದೆಯಲ್ಲಿ ಪತ್ತೆಯಾಗಿರುವ ಆತಂಕಕಾರಿ ಘಟನೆಯೊಂದು ಎರಡು ದಿನಗಳ ಹಿಂದೆ ತಮಿಳುನಾಡಿನಲ್ಲಿ ನಡೆದಿತ್ತು. ಇದೀಗ ಪೊಲೀಸ್ ತನಿಖೆಯಿಂದ ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿರುವ ಪಿಯುಸಿ ವಿದ್ಯಾರ್ಥಿನಿ, ಶಿಶುವನ್ನು ಶಾಲೆಯ ಸಮೀಪದ ಪೊದೆಗಳ ನಡುವೆ ಎಸೆದಿದ್ದಳು ತಿಳಿದು ಬಂದಿದೆ. ಈ ಘಟನೆ ತಮಿಳುನಾಡಿನ ಕಡಲೂರ್ ಜಿಲ್ಲೆಯ ಭುವನಗಿರಿ ಪ್ರದೇಶದಲ್ಲಿ ನಡೆದಿದೆ.
ಇದೀಗ ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿರುವ ಆರೋಪದ ಮೇಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಗುರುವಾರ ವಿದ್ಯಾರ್ಥಿಯೊಬ್ಬ ಪೊದೆಯಲ್ಲಿ ನವಜಾತ ಶಿಶುವಿನ ಮೃತದೇಹವನ್ನು ಗಮನಿಸಿದ್ದಾನೆ. ತಕ್ಷಣ ಆತ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾನೆ. ಆ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಶಿಶುವಿನ ಮೃತದೇಹವನ್ನು ವಶಕ್ಕೆ ಪಡೆದಿದ್ದರು.
ಮೃತ ನವಜಾತ ಶಿಶುವಿನ ಕರುಳು ಬಳ್ಳಿಯನ್ನು ಕೂಡಾ ಸರಿಯಾಗಿ ಕತ್ತರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು, ಶಾಲೆಯಲ್ಲಿಯೇ ಮಗುವಿಗೆ ಜನ್ಮ ನೀಡಿ , ಪೊದೆಗೆ ಎಸೆದಿರಬಹುದು ಎಂದು ಊಹಿಸಿದ್ದರು. ಅದರಂತೆ ತನಿಖೆ ನಡೆಸಿದಾಗ 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿರುವುದು ಬಯಲಾಗಿದೆ. ವಿದ್ಯಾರ್ಥಿನಿಯು ಕೂಡ ತಪ್ಪೊಪ್ಪಿಕೊಂಡಿದ್ದಾಳೆ.
ಶಾಲೆಯ ಶೌಚಗೃಹದಲ್ಲಿ ಮಗುವಿಗೆ ಜನ್ಮ ನೀಡಿರುವ ವಿದ್ಯಾರ್ಥಿನಿ, ಶಾಲೆಯ ಕಾಪೌಂಡ್ ಬಳಿಯಿದ್ದ ಪೊದೆಗಳ ನಡುವೆ ಮಗುವನ್ನು ಎಸೆದು ಮನೆಗೆ ಹೋಗಿದ್ದಳು. ಮತ್ತೊಂದು ಶಾಲೆಯ ಎಸ್ಎಸ್ಎಲ್ ಸಿ ವಿದ್ಯಾರ್ಥಿಯಿಂದ ತಾನು ಗರ್ಭಿಣಿಯಾಗಿದ್ದಾಗಿ ವಿಚಾರಣೆ ವೇಳೆ ಹುಡುಗಿ ಹೇಳಿಕೊಂಡಿದ್ದಾಳೆ . ಬಾಲಕಿಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಬಾಲಕನ ವಿರುದ್ಧ ಪೊಕ್ಸೊ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.