ಮುಂಬೈ : ದಕ್ಷಿಣ ಭಾರತದ ನಟಿಯ ಮೇಲೆ ಅತ್ಯಾಚಾರ, ಬೆದರಿಕೆ; ಮುಂಬೈಯ ಜಿಮ್ ಟ್ರೈನರ್ ಅರೆಸ್ಟ್
Wednesday, September 14, 2022
ಮುಂಬೈ: ಮುಂಬೈನ ಕಫ್ ಪರೇಡ್ ಏರಿಯಾದಲ್ಲಿರುವ ಜಿಮ್ ಟ್ರೈನರ್ ಓರ್ವನು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆಂದು ದಕ್ಷಿಣ ಭಾರತದ ನಟಿಯೊಬ್ಬಳು ಮುಂಬೈನ ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ವರದಿಯಾಗಿದೆ. ಮದುವೆಯಾಗುವುದಾಗಿ ನಂಬಿಸಿದ ಈ ಫಿಟ್‌ನೆಸ್ ಟ್ರೈನರ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ. ಈ ದೂರು ದಾಖಲಾದ ಬೆನ್ನಲ್ಲೇ ಆರೋಪಿ ಜಿಮ್ ಟ್ರೈನರ್ ಆದಿತ್ಯ ಅಜಯ್ ಕಪೂರ್ ಎಂಬಾತನನ್ನು ಬಂಧಿಸಲಾಗಿದೆ.
ಮುಂಬೈನ ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ಅಜಯ್ ಕಪೂರ್ ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376 , 323 , 504 , 506 ( 2 ) , 67 ಮತ್ತು 67 ( ಎ ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. 2021 ಮತ್ತು 2022ರ ನಡುವೆ ತನ್ನ ಮೇಲೆ ಆತ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಆದಿತ್ಯ ಅಜಯ್ ಕಪೂರ್ ತನ್ನ ಸಾಮಾನ್ಯ ಸ್ನೇಹಿತನ ಮೂಲಕ ಮುಂಬೈ ಉಪನಗರದ ಬಾಂದ್ರಾದ ನಿವಾಸದಲ್ಲಿ ಸಂತ್ರಸ್ತೆಯನ್ನು ಭೇಟಿಯಾಗಿದ್ದಾನೆ. ಈ ಸಂತ್ರಸ್ತ ನಟಿಯು ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾಳೆ. ಇವರಿಬ್ಬರು 2021ರ ಆಗಸ್ಟ್‌ನಲ್ಲಿ ಭೇಟಿಯಾಗಿದ್ದರು. ಬಳಿಕ ಇಬ್ಬರೂ ತಮ್ಮ ತಮ್ಮ ಫೋನ್ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡು ನಿರಂತರವಾಗಿ ಸಂಪರ್ಕದಲ್ಲಿದ್ದರು ಮತ್ತು ತುಂಬಾ ಹತ್ತಿರವಾದರು.
ಲಾಕ್‌ಡೌನ್ ಸಂದರ್ಭ ನಟಿ ಕಫ್ ಪರೇಡ್‌ನ ಜೆ ಡಿ ಸೊಮಾನಿ ಮಾರ್ಗ್‌ನಲ್ಲಿರುವ ಆದಿತ್ಯ ಅಜಯ್ ಕಪೂರ್ ಮನೆಗೆ ಭೇಟಿ ನೀಡುತ್ತಿದ್ದಳು. ಇಬ್ಬರ ನಡುವೆ ಆಪ್ತತೆಯು ಹೆಚ್ಚಿದಂತೆ ಆರೋಪಿ ಮದುವೆ ಪ್ರಸ್ತಾಪ ಮಾಡಿದ್ದಾನೆ. ಅದಕ್ಕೆ ನಟಿಯು ಒಪ್ಪಿಗೆ ನೀಡಿದ್ದು, ಕೆಲವು ದಿನಗಳ ಬಳಿಕ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ. ಒಮ್ಮೆ ಇಬ್ಬರೂ ಗೋವಾದಲ್ಲಿ ಭೇಟಿಯಾಗಿದ್ದ ಸಂದರ್ಭ ಲಾಡ್ಜ್‌ನಲ್ಲಿಯೂ ದೈಹಿಕ ಸಂಪರ್ಕ ಬೆಳೆಸಿದ್ದಾನೆ . ನಟಿ ಮದುವೆಯಾಗುವಂತೆ ಕೇಳಿದಾಗ ತನ್ನೊಂದಿಗೆ ದೈಹಿಕ ಸಂಬಂಧವನ್ನು ಮುಂದುವರಿಸುವಂತೆ ಅಜಯ್ ಕಪೂರ್ ಒತ್ತಾಯಿಸಿದ . ಆಕೆ ನಿರಾಕರಿಸಿದಾಗ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ. ಅಲ್ಲದೆ, ಅನೇಕ ಬಾರಿ ನಟಿಯೊಂದಿಗೆ ಲೈಂಗಿ ಸಂಪರ್ಕ ಬೆಳೆಸಿರುವ ಈತ, ಇಬ್ಬರೂ ಜೊತೆಗಿದ್ದ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ವೈರಲ್ ಮಾಡುವುದಾಗಿಯೂ ಮತ್ತು ಕೊಲೆ ಮಾಡುವುದಾಗಿಯು ಬೆದರಿಕೆ ಹಾಕಿದ್ದಾನೆ.
ಸಂತ್ರಸ್ತೆಯ ಪೋಷಕರ ಫೋನ್ ನಂಬರ್‌ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಕೊಲೆ ಬೆದರಿಕೆ ಹಾಕಿದ್ದಾನೆ . ಕಿರುಕುಳದಿಂದ ಬೇಸತ್ತ ನಟಿ ಕೊನೆಗೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಕಳೆದ ಜನವರಿಯಲ್ಲಿ ಆತನ ಅಪಾರ್ಟ್‌ಮೆಂಟ್‌ಗೆ ಹೋಗಿ ನೆಲೆಸಿದ್ದ ಸಂತ್ರಸ್ತ ನಟಿ, ಆತನ ನಿಂದನಾತ್ಮಕ ವರ್ತನೆಯನ್ನು ಸಹಿಸಲಾರದೇ ಮಾರ್ಚ್ ತಿಂಗಳಲ್ಲಿ ಮನೆ ಬಿಟ್ಟು ಬಂದು ಪಾಲಕರ ಮನೆ ಸೇರಿಕೊಂಡಿದ್ದಳು. ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ . ಅದನ್ನು ಸಹಿಸಲಾರದೇ ಸಂತ್ರಸ್ತೆ ದೂರು ನೀಡಿದ್ದು , ಇದೀಗ ಆರೋಪಿಯ ಬಂಧನವಾಗಿದೆ