ಅಥಣಿ: ಕಚೇರಿಯಲ್ಲಿ ಆಗುವ ಭೇದಭಾವ, ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ; ಹೆಸ್ಕಾಂ ಸಿಬ್ಬಂದಿ ಡೆತ್ ನೋಟ್ ಪತ್ತೆ
Tuesday, September 13, 2022
ಅಥಣಿ: ಬೆಳಗಾವಿ ನಗರದ ಅಥಣಿಯ ಹೆಸ್ಕಾಂ ಕಚೇರಿಯ ಸಿಬ್ಬಂದಿ ಮಂಜುನಾಥ ಮುತ್ತಗಿ ಆತ್ಮಹತ್ಯೆಗೆ ಇದೀಗ ತಿರುವು ದೊರಕಿದೆ. ಅವರು ಬರೆದಿರುವ ಡೆತ್‌ನೋಟ್ ಇದೀಗ ಪತ್ತೆಯಾಗಿದ್ದು, ಅದರಲ್ಲಿ ಆತ್ಮಹತ್ಯೆಗೆ ಕಾರಣ ಬಹಿರಂಗಗೊಂಡಿದೆ.
'ಮೇಲಧಿಕಾರಿ ಹಾಗೂ ಲೈನ್‌ಮ್ಯಾನ್‌ನಿಂದ ಆಗುತ್ತಿರುವ ಕಿರುಕುಳ. ಭೇದಭಾವವನ್ನು ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಮಂಜುನಾಥ್ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.
'ನನಗೆ ಹೆಸ್ಕಾಂ ಉದ್ಯೋಗವೆಂದರೆ ತುಂಬಾ ಇಷ್ಟ. ಆದರೆ ಇವರು ಮಾಡುವ ಭೇದಭಾವ, ನಮಗೊಂದು ಅವರಿಗೊಂದು ಎಂದು ನಡೆದುಕೊಳ್ಳುತ್ತಿರುವ ರೀತಿ ನೋಡಲು ಆಗುತ್ತಿಲ್ಲ. ನಮ್ಮನ್ನೆಲ್ಲ ವಾರದ ಏಳು ದಿನ, 24 ಗಂಟೆಯೂ ಕೇವಲವಾಗಿ ನೋಡುತ್ತಾರೆ. ಆದರೆ ನಾವು ಮಾಡುವುದು ಸಹ ಹೆಸ್ಕಾಂ ಕೆಲಸ. ಆದರೆ ಇವರು ನಮ್ಮನ್ನು ನೋಡುವ ರೀತಿ ಸರಿಯಿಲ್ಲ. ಅದು ಬದಲಾಗಬೇಕು' ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.
'ನನ್ನ ಸಾವಿಗೆ ಇವರು ಇಬ್ಬರೇ ಕಾರಣ . ಬಸು ಕುಂಬಾರ್ , ನಜೀರ್ ಡಲಾಯತ್, ಯಾಕೆಂದ್ರೆ ಇವರು ಮಾಡುವ ಮೋಸ , ಅನ್ಯಾಯ , ಮಾನಸಿಕ ಹಿಂಸೆ ದಬ್ಬಾಳಿಕೆ , ಕಿರುಕುಳ ಇದನ್ನೆಲ್ಲ ಸಹಿಸಿಕೊಳ್ಳೋಕೆ ಆಗದೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ . I LOVE HESCOM ' ಎಂದು ಬರೆದಿದ್ದಾರೆ.
ಈ ಬಗ್ಗೆ ಮಂಜುನಾಥ ಮುತ್ತಗಿ ಪತ್ನಿ ಲಕ್ಷ್ಮೀ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಭೇದಭಾವ, ಮಾನಸಿಕ ಹಿಂಸೆ ಮತ್ತು ಕಿರುಕುಳದಿಂದಾಗಿ ತನ್ನ ಪತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿಕೊಂಡಿದ್ದಾರೆ.