![ಉಳ್ಳಾಲ: ಒಲ್ಲದ ವಿವಾಹದಿಂದ ಬೇಸತ್ತು ಸಾವಿನ ದಾರಿ ಹಿಡಿದ ನವವಿವಾಹಿತೆ ! ಉಳ್ಳಾಲ: ಒಲ್ಲದ ವಿವಾಹದಿಂದ ಬೇಸತ್ತು ಸಾವಿನ ದಾರಿ ಹಿಡಿದ ನವವಿವಾಹಿತೆ !](https://blogger.googleusercontent.com/img/b/R29vZ2xl/AVvXsEjghPLmYAM0d2Nn5g2fl5zWC8tIMkMCRL0aomLGSOYESHOTvtIxWkGcL86EKOmFOrg-Wu-jQVAwLv-ifT0cFAlhrvlxs4DK4jNHKjSJuYYU40BDRDYA86KtqGYLhA7odK97cIkw3APQUkNC/s1600/1662443406671710-0.png)
ಉಳ್ಳಾಲ: ಒಲ್ಲದ ವಿವಾಹದಿಂದ ಬೇಸತ್ತು ಸಾವಿನ ದಾರಿ ಹಿಡಿದ ನವವಿವಾಹಿತೆ !
Tuesday, September 6, 2022
ಉಳ್ಳಾಲ: ಒಲ್ಲದ ವಿವಾಹಕ್ಕೆ ಕೊರಳೊಡ್ಡಿರುವ ನವ ವಿವಾಹಿತೆಯೋರ್ವಳು ಮದುವೆಯಾದ ಕೇವಲ 15ದಿನಗಳಲ್ಲೇ ಇಲಿ ಪಾಷಣ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತು ಎಂಬಲ್ಲಿ ನಡೆದಿದೆ.
ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತು ನಿವಾಸಿ ರಶ್ಮಿ ವಿಶ್ವಕರ್ಮ(24) ಮೃತ ನವ ವಿವಾಹಿತೆ.
ರಶ್ಮಿ ವಿಶ್ವಕರ್ಮರಿಗೆ ಆಗಸ್ಟ್ 21 ರಂದು ಗಂಜಿಮಠ ಮೂಲದ ದುಬೈಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಎಂಬವರೊಂದಿಗೆ ವಿವಾಹ ನಡೆದಿತ್ತು. ಏಳು ತಿಂಗಳ ಹಿಂದೆಯೇ ಸಂದೀಪ್ ಮತ್ತು ರಶ್ಮಿ ವಿವಾಹ ನಿಶ್ಚಯವಾಗಿತ್ತು. ಆದರೆ ರಶ್ಮಿ ಒಲ್ಲದ ಮನಸ್ಸಿನಲ್ಲೇ ವಿವಾಹವಾಗಿದ್ದರು ಎನ್ನಲಾಗಿದೆ.
ಸೆ.3ರಂದು ನಗರದ ಕೋಡಿಕಲ್ ನಲ್ಲಿರುವ ರಶ್ಮಿಯ ಅಕ್ಕನ ಮನೆಯಲ್ಲಿ ನವವಿವಾಹಿತ ಜೋಡಿಗೆ ಔತಣ ಕೂಟ ಏರ್ಪಡಿಸಲಾಗಿತ್ತು. ಅಂದು ಬೆಳಗ್ಗೆಯೇ ತವರು ಮನೆಗೆ ಹೋಗಿದ್ದ ರಶ್ಮಿ ಮನೆಯವರಲ್ಲಿ ತಾನು ಇಲಿ ಪಾಶಣ ಸೇವಿಸಿರುವುದಾಗಿ ಹೇಳಿದ್ದಾರೆ. ಆ ಬಳಿಕ ಆಕೆ ವಾಂತಿ ಮಾಡಿ ಅಸ್ವಸ್ಥಳಾಗಿದ್ದು, ಅವರನ್ನು ತಕ್ಷಣ ಕುಟುಂಬಸ್ಥರು ದೇರಳಕಟ್ಟೆಯ ಖಾಸಗಿ ಅಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮುಂಜಾನೆ ರಶ್ಮಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ರಶ್ಮಿಯ ಪತಿ ಸಂದೀಪ್ ಮೂಲತಃ ಗಂಜಿಮಠದವರಾಗಿದ್ದರೂ ಅವರ ಕುಟುಂಬ ಮುಂಬೈಯಲ್ಲಿ ನೆಲೆಸಿದೆ. ಮದುವೆಯಾದ ಬಳಿಕ ರಶ್ಮಿ ಪತಿಯೊಂದಿಗೆ ನೆಲೆಸಿಯೇ ಇಲ್ಲವೆಂದು ತಿಳಿದು ಬಂದಿದೆ. ಈ ಬಗ್ಗೆ
ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.