
ಭುವನೇಶ್ವರ: ನಿದ್ದೆ ಬರುತ್ತಿಲ್ಲವೆಂದು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ
Monday, September 5, 2022
ಭುವನೇಶ್ವರ: ತಮ್ಮ ಜೀವನದಲ್ಲಿ ಬಂದಿರುವ ಸಂಕಷ್ಟಗಳನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರವನ್ನು ನಾವು ಕೇಳುತ್ತಿರುತ್ತೇವೆ. ಆದರೆ ಇಲ್ಲೊಬ್ಬ ನರ್ಸಿಂಗ್ ವಿದ್ಯಾರ್ಥಿನಿ ನಿದ್ರೆ ಬರುತ್ತಿಲ್ಲವೆಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದೆ.
19 ವರ್ಷದ ಈ ನರ್ಸಿಂಗ್ ವಿದ್ಯಾರ್ಥಿನಿ ತಾನು ವಾಸಿಸುತ್ತಿದ್ದ ಒಡಿಶಾದ ಬೋಲಂಗಿ ಜಿಲ್ಲೆಯ ಜಮುಕೊಲಿ ಎಂಬಲ್ಲಿರುವ ಹಾಸ್ಟೆಲ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರವಿವಾರ ರಾತ್ರಿ ಹಾಸ್ಟೆಲ್ ರೂಮ್ ನಲ್ಲಿನ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾಳೆ.
ಕಳೆದ ಕೆಲವು ದಿನಗಳಿಂದ ತನಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕೆ ಬರೆದಿರುವ ಡೆತ್‌ನೋಟ್ ರೂಮ್‌ನಲ್ಲಿ ಸಿಕ್ಕಿದೆ. ತನ್ನ ಸಾವಿಗೆ ಬೇರೆ ಯಾರೂ ಕಾರಣವಲ್ಲವೆಂದು ಹೇಳಿಕೊಂಡಿರುವ ಯುವತಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಮನೆಯವರು ಹಾಗೂ ಸ್ನೇಹಿತರ ಕ್ಷಮೆಯನ್ನೂ ಕೋರಿದ್ದಾಳೆ. ಫೊರೆನ್ಸಿಕ್ ಪರಿಣತರು ಕೈಬರಹವನ್ನು ಪರಿಶೀಲಿಸಿದ್ದು , ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈಕೆ ಎಲ್ಲರೂ ನಿದ್ರಿಸುತ್ತಿರುವಾಗ ರಾತ್ರಿ ಹಾಸ್ಟೆಲ್‌ನಲ್ಲಿ ಓಡಾಡುತ್ತಿದ್ದಳು. ನಿದ್ರೆ ಬರದ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಈಕೆಯನ್ನು ಮನೆಗೆ ಕರೆದೊಯ್ಯುವಂತೆ ಪಾಲಕರಿಗೆ ಶನಿವಾರವೇ ತಿಳಿಸಲಾಗಿತ್ತು ಎಂದು ಹಾಸ್ಟೆಲ್ ನಿರ್ವಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.