ವಿಶಾಖಪಟ್ಟಣಂ: ತುಂಬಿ ಹರಿಯುತ್ತಿದ್ದ ನದಿಯನ್ನು ಈಜಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ
Saturday, September 10, 2022
ವಿಶಾಖಪಟ್ಟಣಂ: ಇಲ್ಲಿನ 21 ವರ್ಷದ ವಿದ್ಯಾರ್ಥಿನಿಯೊಬ್ಬಳು ತುಂಬಿ ಹರಿಯುತ್ತಿದ್ದ ಚಂಪಾವತಿ ನದಿಯನ್ನು ತನ್ನ ಇಬ್ಬರು ಸಹೋದರರ ನೆರವಿನಿಂದ ಈಜಿ ದಾಟಿ ಪರೀಕ್ಷೆಗೆ ಬರೆದ ಅಪರೂಪದ ಘಟನೆಯೊಂದು ವರದಿಯಾಗಿದೆ.
ತಮ್ಮ ಜೀವವನ್ನೇ ಪಣಕ್ಕಿಟ್ಟ ಈಕೆಯ ಇಬ್ಬರು ಸಹೋದರರು ವಿದ್ಯಾರ್ಥಿನಿಯನ್ನು ಭುಜದ ಮೇಲೆ ಹೊತ್ತುಕೊಂಡು ನದಿಯ ಮತ್ತೊಂದು ದಡಕ್ಕೆ ಸೇರಿಸಿದ್ದಾರೆ. ಈ ಮೂವರು ತುಂಬಿ ಹರಿಯುತ್ತಿರುವ ನದಿಯನ್ನು ಈಜುತ್ತಿರುವ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಜಪತಿನಗರಂ ಮಂಡಲದ ಮರಿವಲಸ ಗ್ರಾಮದ ತಡ್ಡಿ ಕಲಾವತಿ ಎಂಬಾಕೆಯೇ ಈ ಸಾಹಸಿ ವಿದ್ಯಾರ್ಥಿನಿ. ಕಲಾವತಿ ವಿಶಾಖಪಟ್ಟಣಂನ ಖಾಸಗಿ ಕಂಪನಿಯ ಉದ್ಯೋಗಿ. ಎರಡು ದಿನಗಳ ಹಿಂದೆ ಇವರು ಸಂಬಂಧಿಕರ ಮನೆಗೆ ಬಂದಿದ್ದರು. ಶನಿವಾರ ಬರೆಯಬೇಕಿದ್ದ ಪರೀಕ್ಷೆಗಾಗಿ ಕಲಾವತಿ ಶುಕ್ರವಾರ ವಿಶಾಖಪಟ್ಟಣಂಗೆ ವಾಪಸ್ಸಾಗಲು ಹೊರಟಿದ್ದರು. ಆದರೆ ಭಾರಿ ಮಳೆಯ ಹಿನ್ನೆಲೆ ಚಂಪಾವತಿ ನದಿ ಉಕ್ಕಿ ಹರಿಯಲಾರಂಭಿಸಿತ್ತು. ಪರಿಣಾಮ ಮರಿವಲಸ ಗ್ರಾಮ ಬಾಹ್ಯ ಜಗತ್ತಿನ ಸಂಪರ್ಕ ಕಡಿದುಕೊಂಡಿತ್ತು.
ಪರೀಕ್ಷೆಯ ವಿಷಯ ತಿಳಿದು ಆಕೆಯ ಇಬ್ಬರು ಸಹೋದರರು ಆಕೆಯನ್ನು ಚಂಪಾವತಿ ನದಿಯ ಮತ್ತೊಂದು ದಡಕ್ಕೆ ಕರೆದೊಯ್ಯಲು ಮುಂದಾದರು. ಇಬ್ಬರು ಸಹೋದರರು ಆಕೆಯನ್ನು ಭುಜದ ಮೇಲೆ ಕುಳ್ಳಿರಿಸಿಕೊಂಡು ಕುತ್ತಿಗೆ ಮುಳುಗುವಷ್ಟು ನೀರಿದ್ದರೂ , ತಮ್ಮ ಜೀವಾಪಾಯವನ್ನು ಲೆಕ್ಕಿಸದೇ ನದಿ ದಾಟಿಸಿದ್ದಾರೆ.