ಮಂಗಳೂರು: ಇಂದಿನಿಂದ ( ಅ.28) ಸುರತ್ಕಲ್ ಟೋಲ್ ಗೇಟ್ ತೆರವಿಗೆ ಹಗಲು ರಾತ್ರಿ ಧರಣಿ; 144 ಸೆಕ್ಷನ್ ಜಾರಿಗೊಳಿಸಿದ ಪೊಲೀಸ್ ಕಮಿಷನರ್
Thursday, October 27, 2022
ಮಂಗಳೂರು: ನಗರದ ಸುರತ್ಕಲ್ ಟೋಲ್ ಗೇಟ್ ವಿರುದ್ಧ ಇಂದಿನಿಂದ ( ಅ.28) ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿ ನಡೆಸಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನಿರ್ಧರಿಸಿತ್ತು. ಆದರೆ ಇದೀಗ ಟೋಲ್ ಗೇಟ್ ಸುತ್ತಲೂ ಮಂಗಳೂರು ನಗರ ಪೊಲೀಸ್ ಕಮೀಷನರ್ 144 ಸೆಕ್ಷನ್ ಜಾರಿಗೊಳಿಸಿರುವುದು ಟೋಲ್ ಗೇಟ್ ವಿರುದ್ಧದ ಪ್ರತಿಭಟನೆಗೆ ಸಂಕಷ್ಟ ಎದುರಾದಂತಾಗಿದೆ.
ಸುರತ್ಕಲ್ ಟೋಲ್ ಗೇಟ್ ತೆರವು ಮಾಡುವಂತೆ ಇತ್ತೀಚೆಗೆ ನಡೆದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಟೋಲ್ ಗೇಟ್ ಗೆ ಮುತ್ತಿಗೆ ಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ ಆ ಬಳಿಕವೂ ಟೋಲ್ ಸಂಗ್ರಹ ಮುಂದುವರಿದಿರುವ ಹಿನ್ನೆಲೆಯಲ್ಲಿ ಇಂದಿನಿಂದ ಹೋರಾಟ ಸಮಿತಿ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿ ನಡೆಸಲು ನಿರ್ಧರಿಸಿತ್ತು.
ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕುಮಾರ್ ಸಭೆ ನಡೆಸಿ ಸುರತ್ಕಲ್ ಟೋಲ್ ಗೇಟ್ ತೆರವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಅಂತಿಮ ಪ್ರಕ್ರಿಯೆಗಳು ನಡೆಯುತ್ತಿದೆ. ಆದ್ದರಿಂದ ಸರ್ಕಾರ ಅಧಿಕೃತವಾಗಿ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ವರೆಗೂ ಧರಣಿಯನ್ನು ಮುಂದೂಡುವಂತೆ ಸುರತ್ಕಲ್ ಟೋಲ್‍ಗೇಟ್ ಹೋರಾಟ ಸಮಿತಿಯ ಸದಸ್ಯರಿಗೆ ಸಲಹೆ ನೀಡಿದ್ದರು. ಆದರೆ ಹೋರಾಟ ಸಮಿತಿಯು ಈ ಹಿಂದೆ ಮಾಡಿರುವ ನಿರ್ಣಯದಂತೆ ಇಂದಿನಿಂದ ಧರಣಿ ಮಾಡಲಾಗುವುದು. ಟೋಲ್ ತೆರವಿನ ಆದೇಶ ಬಂದರೆ ಧರಣಿ ನಿಲ್ಲಿಸಲಾಗುವುದು ಎಂದು ತಿಳಿಸಿದ್ದರು.
ಇದೀಗ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಅಕ್ಟೋಬರ್ 28 ರ ಬೆಳಿಗ್ಗೆ 6 ಗಂಟೆಯಿಂದ ಅ.3 ರ ಸಂಜೆ 6 ರವರೆಗೆ ಎನ್.ಐ.ಟಿ.ಕೆ ಟೋಲ್ ಗೇಟ್ ಸುತ್ತಮುತ್ತಲು 200 ಮೀಟರ್ ವ್ಯಾಪ್ತಿಯನ್ನು ಸಂಪೂರ್ಣ ನಿಷೇಧಿತ ಪ್ರದೇಶವೆಂದು ಘೋಷಿಸಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.