ದಕ್ಷಿಣ ಕೊರಿಯಾದ ಹ್ಯಾವಿಲೋನ್ ಆಚರಣೆ ವೇಳೆ ಕಾಲ್ತುಳಿತಕ್ಕೆ 149 ಮಂದಿ ಬಲಿ: 150 ಕ್ಕೂ ಅಧಿಕ ಮಂದಿಗೆ ಗಾಯ
Sunday, October 30, 2022
ಸಿಯೋಲ್ : ದಕ್ಷಿಣ ಕೊರಿಯಾದಲ್ಲಿನ ಹ್ಯಾಲೋವೀನ್ ಆಚರಣೆಯ ವೇಳೆ ಇಕ್ಕಟ್ಟಿನ ಓಣಿಯಲ್ಲಿ ಬೃಹತ್ ಗುಂಪೊಂದು ಸಿಕ್ಕಿಹಾಕೊಂಡು ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 149 ಮಂದಿ ಮೃತಪಟ್ಟು, 150 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದು ದಕ್ಷಿಣ ಕೊರಿಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತಿದೊಡ್ಡ ದುರಂತ ಇದಾಗಿದೆ ಎಂದು ಹೇಳಾಗುತ್ತಿದೆ. ದಕ್ಷಿಣ ಕೊರಿಯಾ ರಾಜಧಾನಿಯ ಇಟೇವೋನ್ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ ತುರ್ತು ಕಾರ್ಮಿಕರು ಮತ್ತು ಪಾದಚಾರಿಗಳು ಅನಿವಾರ್ಯವಾಗಿ ಬಿದ್ದಿದ್ದ ಜನರ ಮೇಲೆಯೇ ಸಿಪಿಆರ್ ನಡೆಸಬೇಕಾಯಿತು. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಸಿಯೋಲ್‌ನ ಯಂಗ್ಟನ್ ಅಗ್ನಿಶಾಮಕ ಇಲಾಖೆಯ ಮುಖ್ಯಸ್ಥ ಚೋಯ್ ಸಿಯಾಂಗ್ ಬಿಯೋಮ್ ಹೇಳಿದ್ದಾರೆ.
ದಕ್ಷಿಣ ಕೊರಿಯಾ ಸರ್ಕಾರ ಇತ್ತೀಚೆಗಷ್ಟೇ ಕೋವಿಡ್ -19 ನಿರ್ಬಂಧಗಳನ್ನು ಸಡಿಲ ಮಾಡಿತ್ತು. ಕೋವಿಡ್ ಬಳಿಕ ಮೊಟ್ಟಮೊದಲ ಬಾರಿಗೆ ನಡೆದ ಹೊರಾಂಗಣ ಹ್ಯಾಲೋವೀನ್ ಆಚರಣೆಗೆ ಕನಿಷ್ಠ ಒಂದು ಲಕ್ಷ ಮಂದಿ ಇಟೇವೋನ್‌ನಲ್ಲಿ ಸೇರಿದ್ದರು. ಸಿಯೋಲ್‌ನಲ್ಲಿ ಜನಪ್ರಿಯ ಮೋಜಿನ ತಾಣವಾದ ಹ್ಯಾಮಿಲ್ಟನ್ ಹೋಟೆಲ್ ಬಳಿಯ ಬೆಟ್ಟದ ತಪ್ಪಲಿನ ಓಣಿಯಲ್ಲಿ ದೊಡ್ಡ ಸಂಖ್ಯೆಯ ಮಂದಿ ಜಮಾಯಿಸಲು ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಇಕ್ಕಟ್ಟಿನ ಓಣಿಯಲ್ಲಿ ಒಬ್ಬರನ್ನೊಬ್ಬರು ತಳ್ಳಿಕೊಂಡು ಹೋಗುವ ಸಂದರ್ಭದಲ್ಲಿ ಕೆಳಕ್ಕೆ ಬಿದ್ದರು ಎಂದು ದುರಂತದಲ್ಲಿ ಬದುಕಿ ಉಳಿದ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ಹಲವು ಮಂದಿ ಸಿಕ್ಕಿಹಾಕಿಕೊಂಡರು ಎನ್ನಲಾಗಿದೆ