ಅ.25ರಂದು ದೀಪಾವಳಿ ದಿನವೇ ಸೂರ್ಯಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳು ಬಂದ್, ಸೇವೆ ಸ್ಥಗಿತ
Thursday, October 20, 2022
ಬೆಂಗಳೂರು: ಈ ಬಾರಿ ಅ.25ರಂದು ದೀಪಾವಳಿಯಂದೇ ಸೂರ್ಯಗ್ರಹಣ ಸಂಭವಿಸಲಿದೆ. ಆ ದಿನ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಭಕ್ತರಿಗೆ ದರ್ಶನಾವಕಾಶ ಇರುವುದಿಲ್ಲ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅ.25ರ ಮಧ್ಯಾಹ್ನ 2.30 ರಿಂದ ರಾತ್ರಿ 7.30 ರವರೆಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಯಾವುದೇ ಸೇವೆ ನಡೆಯುವುದಿಲ್ಲ. ಜೊತೆಗೆ ಭೋಜನ ಪ್ರಸಾದವೂ ಇರುವುದಿಲ್ಲ. ಅ.26ರ ಬೆಳಗ್ಗೆ 9ರ ಬಳಿಕ ದೇವರ ದರ್ಶನ, ಸೇವೆಗಳು ಆರಂಭಗೊಳ್ಳಲಿವೆ. ಉಡುಪಿ ಶ್ರೀಕೃಷ್ಣಮಠದಲ್ಲಿ ಅ.25 ರಂದು ಸೇವೆ ಹಾಗೂ ಭೋಜನ ವ್ಯವಸ್ಥೆ ಇರುವುದಿಲ್ಲ. ಆದರೆ ಭಕ್ತರಿಗೆ ದೇವರ ದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಧ್ಯಾಹ್ನದ ಪೂಜೆಯು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಬಳಿಕ ರಾತ್ರಿ 7.30 ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. ಯಾವುದೇ ಸೇವೆಗಳು ಇರುವುದಿಲ್ಲ. ಗ್ರಹಣ ಮೋಕ್ಷಗೊಂಡು ರಾತ್ರಿ 7.30 ರ ಬಳಿಕ ಮಹಾಪೂಜೆ ನಡೆಯಲಿದೆ.
ಅಂದು ಹಾಸನದ ಹಾಸನಾಂಬಾ ದೇವಿಯ ದರ್ಶನ ಇರುವುದಿಲ್ಲ, ಬೇಲೂರು ಶ್ರಿ ಚನ್ನಕೇಶವ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ, ಶ್ರೀರಂಗಪಟ್ಟಣದ ನಿಮಿಷಾಂಬಾ ದೇಗುಲವನ್ನು ಸೂರ್ಯಗ್ರಹಣದ ವೇಳೆ ಮುಚ್ಚಲಾಗುತ್ತದೆ. ಮಂತ್ರಾಲಯದಲ್ಲಿ ದೇವರ ದರ್ಶನಕ್ಕೆ ಅವಕಾಶವಿದೆ. ಆದರೆ ಪೂಜೆ ನಡೆಯುವುದಿಲ್ಲ . ಹೊರನಾಡು ಶ್ರೀ ಅನ್ನಪೂರ್ಣೆಶ್ವರಿ ದೇಗುಲದಲ್ಲಿ ದೇವರ ದರ್ಶನಕ್ಕೆ ಅವಕಾಶವಿದೆ. ಆದರೆ ಸೇವೆ, ಪೂಜೆ ಇರುವುದಿಲ್ಲ. ಸಿಗಂಧೂರೇಶ್ವರಿ ದೇವಾಲಯಕ್ಕೆ ಅಂದು ಭಕ್ತರಿಗೆ ಪ್ರವೇಶವಿಲ್ಲ.