ಆತ PUC ಯಲ್ಲಿ ಟಾಪರ್, ಏರೋನಾಟಿಕಲ್ ಕನಸು ಹೊಂದಿದ್ದ- ಹೋಟೆಲ್ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ- ಕಾರಣ
Friday, October 7, 2022
ಬೆಂಗಳೂರು: ಗೋಬಿ ಮಂಚೂರಿ ವಿಚಾರಕ್ಕೆ ನಡೆದ ವಾಗ್ವಾದ ಅಜ್ಜಿಯ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸಿತ್ತು. ವೃದ್ಧೆಯ ಹತ್ಯೆಯ ಬಳಿಕ ತಲೆ ಮರೆಸಿಕೊಂಡಿದ್ದ ಪುತ್ರಿ - ಮೊಮ್ಮಗನನ್ನು ಪೊಲೀಸರು 5 ವರ್ಷಗಳ ಬಳಿಕ ಹೆಡೆಮುರಿಕಟ್ಟಿ ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ.
ಕೆಂಗೇರಿ ಉಪನಗರ ಬಡಾವಣೆ ನಿವಾಸಿ ಶಾಂತಕುಮಾರಿ ಕೊಲೆಗೈದಿರುವ ಆರೋಪದಡಿ ಮೊಮ್ಮಗ ಸಂಜಯ್ (26), ಪುತ್ರಿ ಶಶಿಕಲಾ (46)ಳನ್ನು ಕೆಂಗೇರಿ ಪೊಲೀಸರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿ ನಗರಕ್ಕೆ ಕರೆತಂದು ವಿಚಾರಣೆ ನಡೆಸಲಾಗುತ್ತಿದ್ದೆ.
ಸಂಜಯ್ ಪಿಯುಸಿಯಲ್ಲಿ ಟಾಪರ್ ಆಗಿದ್ದ. ಏರೋನಾಟಿಕಲ್ ಕನಸು ಹೊಂದಿದ್ದ. ಕೆಂಗೇರಿ ಉಪನಗರ ಬಡಾವಣೆಯ ಮನೆಯೊಂದರಲ್ಲಿ ಹತ್ಯೆಯಾದ 69 ವರ್ಷದ ಶಾಂತಕುಮಾರಿ, ಅವರ ಪುತ್ರಿ ಶಶಿಕಲಾ ಹಾಗೂ ಮೊಮ್ಮಗ ಸಂಜಯ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. 2016ರಲ್ಲಿ ಸಂಜಯ್ ಮನೆಗೆ ಗೋಬಿಮಂಜೂರಿ ತಂದಿದ್ದ. ಇದನ್ನು ಯಾವುದೇ ಕಾರಣಕ್ಕೂ ಸೇವಿಸಬಾರದೆಂದು ಅಜ್ಜಿ ಶಾಂತಕುಮಾರಿ ನಿರಾಕರಿಸಿ ಬೈದು ಮೊಮ್ಮಗನ ಮೇಲೆ ಅದನ್ನು ಬಿಸಾಕಿದ್ದರು. ಇದರಿಂದ ಆಕ್ರೋಶಗೊಂಡ ಸಂಜಯ್ ಅಡುಗೆ ಮನೆಯಲ್ಲಿದ್ದ ಲಟ್ಟಣಿಗೆಯನ್ನು ಅಜ್ಜಿಯತ್ತ ಎಸೆದಿದ್ದಾನೆ. ಅದು ಬಲವಾಗಿ ಆಕೆಯ ತಲೆಗೆ ತಗುಲಿ ತೀವ್ರ ರಕ್ತಸ್ರಾವವಾಗಿ ಶಾಂತಕುಮಾರಿ ಮೃತಪಟ್ಟಿದ್ದಾರೆ.
ಆರೋಪಿ ಸಂಜಯ್ ಸ್ನೇಹಿತ ಕುಂಬಳಗೋಡಿನ ನಿವಾಸಿ ನಂದೀಶ್‌ಗೆ ವಿಚಾರವನ್ನು ತಿಳಿಸಿ ಮನೆಗೆ ಕರೆಯಿಸಿಕೊಂಡಿದ್ದ. ಮೂವರು ಒಟ್ಟಾಗಿ ಮನೆಯ ಕಬೋಡ್‌ರ್ನಲ್ಲಿ ಮೃತದೇಹವನ್ನು ಬಚ್ಚಿಟ್ಟಿದ್ದರು. ಬಳಿಕ ಮನೆಯೊಳಗಡೆಯೇ ಗೋಡೆ ಕೊರೆದು ಮೃತದೇಹವನ್ನು ಇರಿಸಿ ಸಿಮೆಂಟ್‌ನಿಂದ ಪ್ಲಾಸ್ಟರಿಂಗ್ ಮಾಡಿ ಬಣ್ಣ ಬಳಿದಿದ್ದರು. ಕೆಲ ತಿಂಗಳ ಬಳಿಕ ಊರಿಗೆ ಹೋಗಿಬರುವುದಾಗಿ ಹೇಳಿ ಮನೆ ಮಾಲಕರಿಗೆ ತಿಳಿಸಿ ಪರಾರಿಯಾಗಿದ್ದರು.
ಆರು ತಿಂಗಳಾದರೂ ಊರಿಗೆ ಹೋಗಿದ್ದ ತಾಯಿ - ಮಗ ಮರಳಿ ಬಾರದಿರುವುದರಿಂದ ಅನುಮಾನಗೊಂಡ ಮನೆ ಮಾಲಕರು, ಮನೆ ರಿಪೇರಿ ಮಾಡಿಸಲು 2017ರ ಮೇ 7 ರಂದು ಮನೆಯೊಳಗೆ ಪ್ರವೇಶಿಸಿದ್ದರು. ಈ ವೇಳೆ ಕೊಲೆ ಮಾಡಿರುವ ವಿಚಾರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ಇದೀಗ ಮೂವರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.