ತಡರಾತ್ರಿ ನಡೆದ ಸರಣಿ ಅಪಘಾತಕ್ಕೆ ನಾಲ್ವರು ಮಕ್ಕಳು ಸೇರಿ 9ಮಂದಿ ಸ್ಥಳದಲ್ಲಿಯೇ ಬಲಿ: ಇನ್ನೇನು ಊರು ತಲುಪಬೇಕೆನ್ನುವಷ್ಟರಲ್ಲಿ ನಡೆಯಿತು ದುರಂತ
Sunday, October 16, 2022
ಹಾಸನ: ಶನಿವಾರ ತಡರಾತ್ರಿ ಸಾರಿಗೆ ಬಸ್, ಟೆಂಪೊ ಟ್ರಾವೆಲರ್ ಹಾಗೂ ಹಾಲಿನ ಟ್ಯಾಂಕರ್ ನಡುವೆ ನಡೆಸಿರುವ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿದಂತೆ 9 ಮಂದಿ ಸ್ಥಳದಲ್ಲೇ ಸಾವಿಗೀಡಾಗಿರುವ ದಾರುಣ ಘಟನೆಯೊಂದು ಹಾಸನದ ಅರಸೀಕೆರೆ ತಾಲೂಕಿನ ಬಾಣವಾರ ಹೋಬಳಿಯಲ್ಲಿರುವ ಅರಸೀಕೆರೆ - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಲೀಲಾವತಿ ( 50 ) , ಚೈತ್ರಾ ( 33 ) , ಸಮರ್ಥ ( 10 ) , ಡಿಂಪಿ ( 12 ) , ತನ್ಮಯ ( 10 ) , ಧ್ರುವ ( 2 ) , ವಂದನಾ ( 20 ) , ದೊಡ್ಡಯ್ಯ ( 60 ) ಹಾಗೂ ಭಾರತಿ ( 50 ) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಈ ದುರ್ಘಟನೆಯಲ್ಲಿ 10 ಮಂದಿಗೆ ಗಾಯಗಳಾಗಿವೆ.
ಎಡ ಬದಿಯಿಂದ ಬರಬೇಕಿದ್ದ ಹಾಲಿನ ಟ್ಯಾಂಕರ್ ಬಲ ಬದಿಯಿಂದ ಬಂದಿರುವುದೇ ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ಕಾರಣ ಡಿವಿಯೇಷನ್ ಪಡೆಯದೆ ಹಾಲಿನ ಟ್ಯಾಂಕರ್ ಆಗಮಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಟಿಟಿ ವಾಹನದಲ್ಲಿದ್ದವರು ಅರಸೀಕೆರೆ ತಾಲೂಕಿನ , ಬಾಣವಾರ ಹೋಬಳಿಯ ಹಳ್ಳಿಕೆರೆ ಗ್ರಾಮದ ನಿವಾಸಿಗಳು. ಇವರು ಧರ್ಮಸ್ಥಳದಿಂದ ಹಾಸನಕ್ಕೆ ತೆರಳಿ, ಅಲ್ಲಿ ಹಾಸನಾಂಬೆಯ ದರ್ಶನ ಪಡೆದು ತಮ್ಮ ಊರಾದ ಹಳ್ಳಿಕೆರೆಗೆ ತೆರಳುತ್ತಿದ್ದರು. ಇನ್ನೇನು ಹಳ್ಳಿಕೆರೆಗೆ ಹೋಗಿ ಮನೆ ಸೇರುವ ತವಕದಲ್ಲಿದ್ದಾಗಲೇ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬಾಣಾವರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಪ್ರಕರಣ ದಾಖಲಿಸಿಕೊಂಡಿದ್ದಾರೆ . ಅರಸಿಕೆರೆ ಶಾಸಕ ಶಿವಲಿಂಗೇಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಆರೋಗ್ಯ ವಿಚಾರಿಸಿ , ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.