ಅತಿವೇಗದ ಕಾರು ಚಾಲನೆಯ ಫೇಸ್ ಬುಕ್ ಲೈವ್ ಸಾಹಸ: ಬಿಎಂಡಬ್ಲ್ಯು ಅಪಘಾತಕ್ಕೆ ನಾಲ್ವರು ಬಲಿ
Monday, October 17, 2022
ಹೊಸದಿಲ್ಲಿ: ಅತಿ ವೇಗದ ಕಾರು ಚಾಲನೆಯ ಫೇಸ್ಬುಕ್ ಲೈವ್ ಮಾಡುತ್ತಿದ್ದ ವೇಳೆ ನಾಲ್ವರು ಸ್ನೇಹಿತರಿದ್ದ ಬಿಎಂಡಬ್ಲ್ಯೂ ಕಾರು ಅಪಘಾತಗೊಂಡ ಘಟನೆ ಪೂರ್ವಾಂಚಲ ಎಕ್ಸ್‌ಪ್ರೆಸ್ ಹೈವೇಯ ಸುಲ್ತಾನ್‌ಪುರದಲ್ಲಿ ನಡೆದಿದೆ. ಸಂಪೂರ್ಣ ನಜ್ಜುಗುಜ್ಜಾಗಿರುವ ಕಾರಿನಲ್ಲಿದ್ದ ನಾಲ್ವರೂ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಡಾ.ಆನಂದ್ ಪ್ರಕಾಶ್, ಇಂಜಿನಿಯರ್ ದೀಪಕ್ ಕುಮಾರ್ , ರಿಯಲ್ ಎಸ್ಟೇಟ್ ಉದ್ಯಮಿ ಅಖಿಲೇಶ್ ಸಿಂಗ್ ಮತ್ತು ಉದ್ಯಮಿ ಮುಖೇಶ್ ಅವರ ರಕ್ತಸಿಕ್ತ ದೇಹಗಳು ರಸ್ತೆಯಲ್ಲಿ ಚೂರು ಚೂರಾಗಿ ಬಿದ್ದ ದೃಶ್ಯ ಕಂಡುಬಂತು. ಬಿಹಾರದ ಈ ನಾಲ್ವರೂ ದೆಹಲಿಗೆ ಬಿಎಂಡಬ್ಲ್ಯೂ ಕಾರಿನಲ್ಲಿ ಹೊರಟಿದ್ದರು.
ಬಿಹಾರದ ರೋಹ್ವಾಸ್ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಡಾ.ಆನಂದ್ ಪ್ರಕಾಶ್ ( 35 ) ಎಂಬವರು ಇತರ ಮೂವರೊಂದಿಗೆ ಉತ್ಸಾಹದಿಂದ 230 ಕಿ.ಮೀ. ವೇಗದಲ್ಲಿ ಚಲಾಯಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ಅಪಘಾತಕ್ಕೀಡಾಗಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಅತೀ ವೇಗದ ಕಾರು ಚಾಲನೆಯನ್ನು ಫೇಸ್‌ಬುಕ್ ಲೈವ್ ಮಾಡುತ್ತಿದ್ದರು. ನಾಲ್ವರ ಪೈಕಿ ಓರ್ವ ಸ್ಪೀಡ್‌ಮೀಟರ್ ಇನ್ನೇನು ಕೆಲವೇ ಕ್ಷಣದಲ್ಲಿ 300 ಕಿಲೋಮೀಟರ್ ತಲುಪಲಿದೆ ಎಂದು ಹೇಳುತ್ತಿರುವುದು ಕೇಳಿಸುತ್ತಿತ್ತು .
ಈ ಪೈಕಿ ಫೇಸ್‌ಬುಕ್ ಲೈವ್ ಆಗುತ್ತಿರುವಾಗಲೇ ಸಾಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದ. ಇದಾಗಿ ಕೆಲವೇ ಕ್ಷಣಗಳಲ್ಲಿ ಆತ ಬಯಸಿದ್ದ ದುರಂತ ಸಂಭವಿಸಿದೆ ಎಂದು ಪೊಲೀಸರು ವಿವರಿಸಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಈ ಬಿಎಂಡಬ್ಲ್ಯು ಕಾರು ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಢಿಕ್ಕಿ ಹೊಡೆದು ನಜ್ಜುಗುಜ್ಜಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆ ಮರೆಸಿಕೊಂಡಿರುವ ಟ್ರಕ್ ಚಾಲಕನನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ. ಅಪಘಾತದ ತಾಂತ್ರಿಕ ನಡೆಸಲು ಆದೇಶಿಸಲಾಗಿದೆ. ಟ್ರಕ್ ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆಯ ಆರೋಪ ಹೊರಿಸಲಾಗಿದೆ.