ಜಾಲಿರೈಡ್ ಗೆ ಹೋಗಿದ್ದ ಇಬ್ಬರು ಯುವಕರ ಜೀವತೆಗೆದ ಬೈಕ್ ಸ್ಟ್ಯಾಂಡ್ : ಓರ್ವನ ಪ್ರಾಣ ಉಳಿಸಿದ ಹೆಲ್ಮೆಟ್
Sunday, October 30, 2022
ಬೆಂಗಳೂರು: ಬೈಕ್ ನಲ್ಲಿ ಜಾಲಿರೈಡ್ ಹೋಗುತ್ತಿದ್ದ ವೇಳೆ ಸೈಡ್‌ಸ್ಟ್ಯಾಂಡ್‌ನಿಂದಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟರೆ, ಮತ್ತೋರ್ವನು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಯಲಹಂಕ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಈ ದುರ್ಘಟನೆ ಸಂಭವಿಸಿದೆ.
ಪ್ರಸ್ತುತ ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ಮೂಲತಃ ದೆಹಲಿ ಮೂಲದ ಅಮಿತ್ ಸಿಂಗ್ ( 29 ) ಮತ್ತು ಮಹಾರಾಷ್ಟ್ರ ಮೂಲದ ಅಮೋಲ್ ಪ್ರಮೋದ್ ಆಮೈ ( 29 ) ಸಾವಿಗೀಡಾದ ಹಿಂಬದಿ ಸವಾರ ಯುವಕರು. ಬೈಕ್ ಸವಾರ ರಾಜಸ್ತಾನದ ಸೌರವ್ ದೇ ( 29 ) ಎಂಬಾತ ಹೆಲ್ಮೆಟ್ ಧರಿಸಿದ್ದು, ಆತನ ಎಡಗೈ ಹಾಗೂ ತಲೆಗೆ ಗಾಯಗಳಾಗಿದೆ. ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಶನಿವಾರ ಬೆಳಗ್ಗೆ 10.45ರ ಸುಮಾರಿಗೆ ಬಳ್ಳಾರಿ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೈತರ ಸಂತೆ ಬಳಿ ಫೈ ಓವರ್ ಮೇಲೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರೆಲ್ಲರೂ ನಗರದ ಎಚ್‌ಎಸ್‌ಆರ್ ಲೇಔಟ್‌ನ ಕಾಲೇಜೊಂದರಲ್ಲಿ ಎಂಟೆಕ್ ವ್ಯಾಸಂಗ ಮಾಡುತ್ತಿದ್ದರು. ಶನಿವಾರ ಮುಂಜಾನೆ ಮೂವರೂ ಒಂದೇ ದ್ವಿಚಕ್ರ ವಾಹನದಲ್ಲಿ ನಂದಿಬೆಟ್ಟಕ್ಕೆ ಹೋಗಿದ್ದರು. ಬಳಿಕ ನಂದಿಬೆಟ್ಟದ ಜಾಲಿ ರೈಡ್ ಮುಗಿಸಿಕೊಂಡು ನಗರಕ್ಕೆ ವಾಪಸಾಗುತ್ತಿದ್ದರು.
ಹೆಲ್ಮೆಟ್ ಧರಿಸಿದಕ್ಕೆ ಬದುಕುಳಿದ ಸವಾರ:
ಬಳ್ಳಾರಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೈತರ ಸಂತೆ ಬಳಿ ಫ್ಲೈ ಓವರ್‌ನಲ್ಲಿ ಬರುತ್ತಿದ್ದ ವೇಳೆ ತೆಗೆಯದೇ ಇದ್ದ ಸೈಡ್ ಸ್ಟ್ಯಾಂಡ್ ರಸ್ತೆ ಪಕ್ಕದ ಸಿಮೆಂಟ್ ಬ್ಲಾಕ್‌ಗೆ ತಗುಲಿದೆ. ಪರಿಣಾಮ ಬೈಕ್ ಸವಾರ ಸೌರವ್ ದೇನ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಭಸವಾಗಿ ಫೈ ಓವರ್‌ನ ತಡೆಗೋಡೆಗೆ ಡಿಕ್ಕಿ ಹೊಡೆದಿದೆ . ಡಿಕ್ಕಿಯ ರಭಸಕ್ಕೆ ಹಿಂಬದಿ ಸವಾರರಾಗಿದ್ದ ಅಮಿತ್ ಸಿಂಗ್ ಮತ್ತು ಪ್ರಮೋದ್ ಆಮೈ ಫೈ ಓವರ್‌ನಿಂದ ಕೆಳಗಿನ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ಇಬ್ಬರ ತಲೆಗೆ ಗಂಭೀರ ಗಾಯಯವಾಗಿದೆ.
ಸೌರವ್ ದೇ ಹೆಲ್ಮಟ್ ಧರಿಸಿದ್ದ ಪರಿಣಾಮ ಕೈ ಹಾಗೂ ತಲೆಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಸ್ಥಳೀಯರು ತಕ್ಷಣ ಮೂವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಅಮೋಲ್ ಪ್ರಮೋದ್ ಅಮ್ಟೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಅಮಿತ್ ಸಿಂಗ್ ಚಿಕಿತ್ಸೆ ಫಲಿಸದೆ ಮಧ್ಯಾಹ್ನ 12.50 ರ ಸುಮಾರಿಗೆ ಮೃತಪಟ್ಟಿದ್ದಾನೆ. ಸವಾರ ಸೌರವ್ ದೇಗೆ ಚಿಕಿತ್ಸೆ ಮುಂದುವರಿದಿದ್ದು, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಿಚಕ್ರ ವಾಹನದ ಅತಿಯಾದ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಸಂಬಂಧ ಸವಾರ ಸೌರವ್ ದೇ ವಿರುದ್ಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು , ತನಿಖೆ ಮುಂದುವರಿದಿದೆ.