ಇರಾನ್ ಮಹಿಳೆಯರ ಮೇಲೆ ನೈತಿಕ ಪೊಲೀಸ್ ಗಿರಿ: ಅರೆನಗ್ನಳಾಗಿ ತಿರುಗೇಟು ನೀಡಿದ ಬಾಲಿವುಡ್ ನಟಿ
Wednesday, October 12, 2022
ನವದೆಹಲಿ: ಹಿಜಾಬ್ ಸೇರಿದಂತೆ ವಿವಿಧ ಕಠಿಣ ನಿಯಮಗಳಿಗೆ ವಿರೋಧ ವ್ಯಕ್ತಪಡಿಸಿರುವ ಮಹಿಳೆಯರ ಮೇಲೆ ಇರಾನ್‌ನಲ್ಲಿ ನಡೆಯುತ್ತಿರುವ 'ನೈತಿಕ ಪೊಲೀಸ್ ಗಿರಿ'ಗೆ ಪ್ರಪಂಚದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಇರಾನ್ ಮೂಲದ ಬಾಲಿವುಡ್ ನಟಿ ಎಲ್ನಾಜ್ ನೊರಜಿ ವಿವಸ್ತ್ರಗಳಾಗುವ ಮೂಲಕ ನೈತಿಕ ಪೊಲೀಸ್ ಗಿರಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ನಟಿ ಎಲ್ಲಾಜ್ ನೊರಜಿ, ನೆಟ್‌ಫಿಕ್ಸ್ ಸರಣಿಯ 'ಸೇಕ್ರೆಡ್ ಗೇಮ್ಸ್'ನಲ್ಲಿ ನಟಿಸಿದ್ದಾರೆ. ಸದ್ಯ ಇನ್‌ಸ್ಟಾಗ್ರಾಂನಲ್ಲಿ ವೀಡಿಯೋವೊಂದನ್ನು ಹರಿಬಿಟ್ಟಿರುವ ಎಲ್ಲಾಜ್ ಅವರು, ನನ್ನ ದೇಹ ನನ್ನ ಆಯ್ಕೆ ಎಂದು ಹೇಳುವ ಮೂಲಕ ನಮಗೆ ಇಷ್ಟವಿರುವುದನ್ನು ಧರಿಸುವ ಹಕ್ಕನ್ನು ಖಾತ್ರಿ ಪಡಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ಎಲ್ಲಾಜ್ ನೊರೊಜಿಯವರು ಹಿಜಾಬ್ ಸಹಿತ ತಾವು ಧರಿಸಿರುವ ಬಟ್ಟೆಯ ಹಲವು ಪದರಗಳನ್ನು ಒಂದೊಂದಾಗಿ ಕಳಚಿಡುವ ಮೂಲಕ ಅರೆಬೆತ್ತಲಾಗುತ್ತಾರೆ. ಈ ಮೂಲಕ ನನಗೆ ಅನಿಸಿದ್ದನ್ನು ನಾನು ಧರಿಸುತ್ತೇನೆ ಮತ್ತು ಇದು ನನ್ನ ಹಕ್ಕು ಸಹ ಹೌದು, ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ವಿಶ್ವದ ಯಾವುದೇ ಮೂಲೆಯಲ್ಲಿರುವ ಪ್ರತಿ ಮಹಿಳೆಗೂ ಆಕೆಯ ಬಯಸಿದ ಉಡುಪನ್ನು ಧರಿಸುವ ಹಕ್ಕಿದೆ. ಆಕೆ ಎಲ್ಲಿಯವಳು ಎಂಬುದು ಮುಖ್ಯವಲ್ಲ. ಆಕೆ ಇಚ್ಛಿಸಿದ್ದನ್ನು ಧರಿಸುವ ಸಂಪೂರ್ಣ ಸ್ವಾತಂತ್ರ್ಯವಿದೆ. ಯಾವುದೇ ಪುರುಷ ಅಥವಾ ಇತರ ಯಾವುದೇ ಮಹಿಳೆಗೆ ಅವಳನ್ನು ನಿರ್ಣಯಿಸಲು ಅಥವಾ ಅವಳನ್ನು ಬೇರೆ ರೀತಿಯ ಉಡುಗೆ ಧರಿಸುವಂತೆ ಹೇಳುವ ಹಕ್ಕು ಹೊಂದಿಲ್ಲ ಎಂದು ಎಲ್ಲಾಜ್ ಬರೆದಿದ್ದಾರೆ.
ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಭಿನ್ನ ದೃಷ್ಟಿಕೋನ ಮತ್ತು ನಂಬಿಕೆಗಳು ಇರುತ್ತವೆ ಮತ್ತು ಅವುಗಳಿಗೆ ಗೌರವ ಕೊಡಬೇಕು. ಪ್ರಜಾಪ್ರಭುತ್ವ ಎಂದರೆ ನಿರ್ಧರಿಸುವ ಶಕ್ತಿ. ಪ್ರತಿಯೊಬ್ಬ ಮಹಿಳೆಗೆ ತನ್ನ ದೇಹವನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿರಬೇಕು. ನಾನಿಲ್ಲಿ ನಗ್ನತೆಯನ್ನು ಪ್ರಚಾರ ಮಾಡುತ್ತಿಲ್ಲ, ನಾನು ಆಯ್ಕೆಯ ಸ್ವಾತಂತ್ರ್ಯವನ್ನು ಪ್ರಚಾರ ಮಾಡುತ್ತಿದ್ದೇನೆ ಎಂದು ಎಲ್ಲಾಜ್ ಬರೆದಿದ್ದಾರೆ.