ಮಂಗಳೂರು: ಪಟಾಕಿ ತಂದ ಅವಾಂತರದಲ್ಲಿ ಹೊತ್ತಿ ಉರಿದ ಮೂರು ಬೋಟ್ ಗಳು?
Saturday, October 29, 2022
ಮಂಗಳೂರು: ನಗರದ ಬೆಂಗ್ರೆಯಲ್ಲಿ ಲಂಗರು ಹಾಕಲಾಗಿದ್ದ 3 ಬೋಟ್ಗಳು ಧಗಧಗನೆ ಹೊತ್ತಿ ಉರಿದ ಘಟನೆ ನಿನ್ನೆ ನಡೆದಿದೆ. ಮಕ್ಕಳು ಸಿಡಿಸಿರುವ ದೀಪಾವಳಿ ಪಟಾಕಿಯ ಕಿಡಿಯಿಂದ ಈ ಬೋಟ್ ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ
ಹೌದು.. ಲಕ್ಷದ್ವೀಪಕ್ಕೆ ಕಾರ್ಗೋ ಸಾಗಾಟ ಮಾಡುವ ಬೋಟ್ ಗಳನ್ನು ಮಂಗಳೂರಿನ ಬೆಂಗ್ರೆಯಲ್ಲಿ ರಿಪೇರಿ ಮಾಡಲು ಲಂಗರು ಹಾಕಲಾಗಿತ್ತು. ಒಟ್ಟೊಟ್ಟಿಗೆ ಮೂರು ಬೋಟ್ ಗಳು ಲಂಗರು ಹಾಕಲಾಗಿತ್ತು. ಅಲ್ಲಿನ ಕೆಲ ಮಕ್ಕಳಿ ಬೋಟ್ ಲಂಗರು ಹಾಕಲಾಗಿರುವ ಸ್ಥಳದಲ್ಲಿಯೇ ಪಟಾಕಿ ಸಿಡಿಸಿದ್ದಾರೆ. ಈ ಪಟಾಕಿಯ ಕಿಡಿಯು ಬೋಟ್ ನೊಳಗೆ ಹಾರಿ ಈ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆ.
ಈ ಮೂರು ಬೋಟ್ ಗಳಲ್ಲಿ ಒಂದು ಬೋಟ್ ನಲ್ಲಿ ಡೀಸೆಲ್ ತುಂಬಿಸಲಾಗಿತ್ತು. ಪಟಾಕಿಯ ಕಿಡಿಗೆ ಬೆಂಕಿ ಜ್ವಾಲೆಯೆದ್ದು, ಪಕ್ಕದಲ್ಲಿದ್ದ ಮತ್ತೆರಡು ಬೋಟ್ ಗಳಲ್ಲೂ ಬೆಂಕಿ ಕಾಣಿಸಿಕೊಂಡು ಅದು ಕೂಡಾ ಅಗ್ನಿಗಾಹುತಿಯಾಗಿದೆ.
ಸಂಜೆ 5 ಗಂಟೆಗೆ ತಗುಲಿದ ಈ ಬೆಂಕಿಯನ್ನು ಸುಮಾರು ನಾಲ್ಕು ಗಂಟೆ ಗಳ ಕಾಲ ಕಾರ್ಯಾಚರಣೆ ನಡೆಸಿ ನಂದಿಸಲಾಗಿದೆ. ಮಂಗಳೂರಿನ ಪಾಂಡೇಶ್ವರ,ಕದ್ರಿ ಅಗ್ನಿ ಶಾಮಕ ದಳದ ವಾಹನ , ಸ್ಥಳೀಯ ಕೈಗಾರಿಕಾ ಸಂಸ್ಥೆಗಳ ಹತ್ತು ವಾಹನಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.