ಚಿಕ್ಕಮಗಳೂರು: ಚಿನ್ನದ ನಾಣ್ಯವೆಂದು ನಂಬಿಸಿ ತಾಮ್ರದ ನಾಣ್ಯ ನೀಡಿ ವಂಚಿಸಿದ ಮೂವರು ಅಂದರ್
Monday, October 17, 2022
ಚಿಕ್ಕಮಗಳೂರು: ವ್ಯಕ್ತಿಯೊಬ್ಬರಿಗೆ ಚಿನ್ನದ ನಾಣ್ಯ ತೋರಿಸಿ ಬಳಿಕ ತಾಮ್ರದ ನಾಣ್ಯ ನೀಡಿ ವಂಚನೆಗೈದಿರುವ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿಯ ಶ್ರೀನಿವಾಸನಾಯ್ಕ ( 21 ), ಕೋಟಿನಾಯ್ಕ ( 28 ), ವೆಂಕಟೇಶ್‌ನಾಯ್ಕ ಬಂಧಿತ ಆರೋಪಿಗಳು. ಆರೋಪಿಗಳಿಂದ 5 ಸಾವಿರ ರೂ. ನಗದು, 1 ಕಾರು, ಎರಡು ಚಿನ್ನದ ನಾಣ್ಯ, 1.95 ಕೆಜಿ ತಾಮ್ರದ ನಾಣ್ಯ ಹಾಗೂ 3 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾಫಿ ಎಸ್ಟೇಟ್ ಒಂದರಲ್ಲಿ ಚಿಕ್ಕಮಗಳೂರಿನ ಕೆ.ಮಹೇಶ್ ಮತ್ತು ಹರಪನಹಳ್ಳಿಯ ಶ್ರೀನಿವಾಸ್ ಅವರ ಪರಿಚಯವಾಗಿತ್ತು. ಇತ್ತೀಚೆಗೆ ಮಹೇಶ್ ಅವರಿಗೆ ಕರೆ ಮಾಡಿದ್ದ ಶ್ರೀನಿವಾಸನಾಯ್ಕ ತನ್ನ ಬಳಿ 2 ಕಿಲೋ ಚಿನ್ನದ ನಾಣ್ಯಗಳಿವೆ ಕನಿಷ್ಠ ಅಂದರೆ 5 ಲಕ್ಷ ರೂ.ಗೆ ಕೊಡುವುದಾಗಿ ಪುಸಲಾಯಿಸಿದ್ದಾನೆ. ಅವರು ಇದಕ್ಕೆ ಒಪ್ಪಿದ ಬಳಿಕ ಮೂವರು ಆರೋಪಿಗಳು ಕಾರಿನಲ್ಲಿ ಚಿಕ್ಕಮಗಳೂರಿಗೆ ಬಂದು ಎರಡು ಅಸಲಿ ಚಿನ್ನದ ನಾಣ್ಯಗಳನ್ನು ಮಹೇಶ್ ಅವರಿಗೆ ಕೊಟ್ಟು ಅಸಲಿಯತ್ತು ಪರಿಶೀಲಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನು ಪರಿಶೀಲಿಸಿದಾಗ ಅವು ಅಸಲಿ ನಾಣ್ಯ ಎಂದು ಗೊತ್ತಾಗಿದೆ. ಬಳಿಕ ಮಹೇಶ್ ಆರೋಪಿಗಳಿಂದ 20 ನಾಣ್ಯಗಳನ್ನು ಪಡೆದುಕೊಂಡು ಗೂಗಲ್ ಪೇ ಮೂಲಕ 5 ಸಾವಿರ ರೂ. ಹಣ ನೀಡಿದ್ದಾರೆ. ಮಹೇಶ್ ಅವರು 20 ನಾಣ್ಯಗಳನ್ನು ಅಕ್ಕಸಾಲಿಗರಿಗೆ ಕೊಟ್ಟು ಪರೀಕ್ಷೆ ಮಾಡಿಸಿದಾಗ ಅವು ತಾಮ್ರದ ನಾಣ್ಯಗಳು ಎಂದು ಗೊತ್ತಾಗಿದೆ.
ತಕ್ಷಣ ಅವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಸಿರುವ ತಂಡ ಮೂವರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.